ಭಾರತ್ ಜೋಡೊ ಪಾದಯಾತ್ರೆಗೆ ಆರೆಸ್ಸೆಸ್ ನ ದತ್ತಾತ್ರೇಯ ಹೊಸಬಾಳೆ ಪರೋಕ್ಷ ಬೆಂಬಲ: ರಮೇಶ್ ಬಾಬು

Update: 2022-10-03 15:24 GMT
 ರಮೇಶ್‍ ಬಾಬು |  ದತ್ತಾತ್ರೇಯ ಹೊಸಬಾಳೆ

ಬೆಂಗಳೂರು, ಅ.3: ಆರ್ಥಿಕ ಅಸಮಾನತೆ, ಬಡತನ, ನಿರುದ್ಯೋಗ ಅತ್ಯಂತ ಅಪಾಯಕಾರಿ ಎಂದು ಹೇಳುವ ಮೂಲಕ ಆರೆಸ್ಸೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, ಪರೋಕ್ಷವಾಗಿ ಭಾರತ್ ಜೋಡೋ ಪಾದಯಾತ್ರೆಯ ಉದ್ದೇಶವನ್ನು ಬೆಂಬಲಿಸಿದ್ದಾರೆ ಎಂದು ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ರಮೇಶ್‍ಬಾಬು ಹೇಳಿದ್ದಾರೆ.    

ದತ್ತಾತ್ರೇಯ ಹೊಸಬಾಳೆ ಹೇಳಿಕೆ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟನೆ ಹೊರಡಿಸಿರುವ ರಮೇಶ್ ಬಾಬು ಅವರು,  ಕೇಂದ್ರ ಸರಕಾರದಲ್ಲಿ ಕಳೆದ ಎಂಟು ವರ್ಷಗಳಿಂದ ಬಿಜೆಪಿ ಆಡಳಿತವನ್ನು ನಡೆಸುತ್ತಿದೆ. ಜನಸಾಮಾನ್ಯರ ಬದುಕಿಗೆ ಆದ್ಯತೆ ನೀಡುವ ಬದಲು ಧರ್ಮ ಮತ್ತು ಜಾತಿಗಳ ಹೆಸರಿನಲ್ಲಿ ಭಾವನೆಗಳನ್ನು ಬಳಸಿಕೊಂಡು ಸಾಧನೆಯ ಪಟ್ಟ ಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ರಮೇಶ್ ಬಾಬು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಡತನ, ನಿರುದ್ಯೋಗ, ಅಸಮಾನತೆ ಕುರಿತು ಆರೆಸ್ಸೆಸ್ ಪ್ರ.ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಎಚ್ಚರಿಕೆ   

ಹೊಸಬಾಳೆ ಅವರು ಹೇಳಿರುವಂತೆ ಭಾರತದ ಸುಮಾರು 23 ಕೋಟಿಗೂ ಅಧಿಕ ಜನರ ದಿನದ ತಲಾ ಆದಾಯ 375 ರೂಪಾಯಿಗಳಿಗಿಂತ ಕಡಿಮೆ ಇದೆ. ಕೇವಲ ಪ್ರಚಾರದಲ್ಲಿ ಮುಳುಗಿರುವ ಕೇಂದ್ರದ ಬಿಜೆಪಿ ಸರಕಾರಕ್ಕೆ ಕಿವಿ ಹಿಂಡುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸುತ್ತಿರುವ ಅಂಕಿ ಅಂಶಗಳನ್ನು ಹೊಸಬಾಳೆ ಬೆಂಬಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ. 

ಕರ್ನಾಟಕ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರಕಾರಗಳು ಈ ದೇಶದ ಜನರನ್ನು, ಸಮುದಾಯಗಳನ್ನು, ಧರ್ಮಗಳನ್ನು ಬೆಸೆಯುವ ಕಾರ್ಯಕ್ಕೆ ಮುಂದಾಗಲಿ, ಭಾವೈಕ್ಯತೆಯ ಸಂದೇಶದ ಜೊತೆಗೆ ಜನರ ಬದುಕನ್ನು ಹಸನುಗೊಳಿಸುವ ಸಂಕಲ್ಪ ಮಾಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News