ಮದ್ಯಪಾನ ಮಾಡಿ ವಾಹನ ಚಲಾವಣೆ: ನ್ಯಾಯಾಲಯದಲ್ಲಿ ಮಾತ್ರ ದಂಡ ಪಾವತಿಗೆ ಹೈಕೋರ್ಟ್ ಸೂಚನೆ

Update: 2022-10-03 16:32 GMT

ಬೆಂಗಳೂರು, ಅ.3: ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದದ್ದನ್ನು ಪ್ರಶ್ನಿಸಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬುದಾಗಿ ಸಾಕ್ಷ್ಯರಹಿತ ಆರೋಪದಲ್ಲಿ ಇಬ್ಬರು ಯುವಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪಗಳಲ್ಲಿ ನ್ಯಾಯಾಲಯದಲ್ಲಿ ಮಾತ್ರ ದಂಡ ಪಾವತಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಬಿಹಾರ ರಾಜ್ಯದ ಪಾಟ್ನಾ ಮೂಲದ ಪ್ರಿಯಾಂಶು ಕುಮಾರ್ ಮತ್ತು ಅಲೋಕ್ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ತನಿಖಾಧಿಕಾರಿಗಳು ಅರ್ಜಿದಾರರ ಆರೋಪ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಹೀಗಾಗಿ, ಆರೋಪ ನಿಜ ಎಂದು ತಿಳಿಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪಗಳಲ್ಲಿ ನ್ಯಾಯಾಲಯದಲ್ಲಿ ಮಾತ್ರ ದಂಡ ಪಾವತಿಸಬೇಕು ಎಂಬುದಾಗಿ ಸಂಚಾರಿ ಪೆÇಲೀಸ್ ಆಯುಕ್ತರು ಈಗಾಗಲೇ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ಉಲ್ಲಂಘಿಸಿ ತನಿಖಾಧಿಕಾರಿಗಳು ಅರ್ಜಿದಾರರಿಂದ ದಂಡ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಇದು ನಿಯಮ ಬಾಹಿರವಾಗಿದ್ದು, ಸುತ್ತೋಲೆ ಅನುಸಾರ ದಂಡವನ್ನು ಕೋರ್ಟ್‍ನಲ್ಲಿಯೇ ಪಾವತಿಸಬೇಕೆಂದು ನ್ಯಾಯಪೀಠವು ತಿಳಿಸಿದೆ. 

ಜೊತೆಗೆ, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರನ್ನು ಪರಿಶೀಲನೆಗೊಳಪಡಿಸುವ ಸಂದರ್ಭದಲ್ಲಿ ಸಂಪೂರ್ಣ ಘಟನೆ ಚಿತ್ರೀಕರಣ ಮಾಡಬೇಕು. ಈ ಕೇಸ್‍ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಲ್ಲ. ಅಲ್ಲದೇ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬುದಾಗಿ ತನಿಖಾಧಿಕಾರಿಗಳು ಹೇಳಿದ್ದರೂ, ಸಾಕ್ಷಾಧಾರಗಳು ಇಲ್ಲದಿದ್ದಾಗ ಆರೋಪಗಳನ್ನು ಹೊರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಪ್ರಕರಣವೇನು?: 2017ರ ಎಪ್ರಿಲ್ 9ರಂದು ರಾತ್ರಿ ಕಾರ್ಯನಿರ್ವಹಿಸುತ್ತಿದ್ದ ಎಚ್‍ಎಎಲ್ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗೆ, ದೊಡ್ಡನೆಕ್ಕುಂದಿ ಎಂಬಲ್ಲಿ ಕೆಲವು ಕಿಡಿಗೇಡಿಗಳು ಕಾರೊಂದನ್ನು ಜಖಂಗೊಳಿಸಿರುವುದಾಗಿ ಕರೆ ಬಂದಿತ್ತು. ತಕ್ಷಣ ಹೋಯ್ಸಳ ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದ ಪೊಲೀಸರು, ದ್ವಿಚಕ್ರವಾಹನದಲ್ಲಿ ಸಂಶಯಾಸ್ಪದವಾಗಿ ತೆರಳುತ್ತಿದ್ದ ಅರ್ಜಿದಾರ ಅಲೋಕ್ ಕುಮಾರ್ ನನ್ನು ಪ್ರಶ್ನಿಸಿದ್ದರು.

ಈ ವೇಳೆ ಅಲೋಕ್‍ಕುಮಾರ್, ಕರೆ ಮಾಡಿ ತಮ್ಮ ಸ್ನೇಹಿತ ಪ್ರಿಯಾಂಶುಗೆ ಸ್ಥಳಕ್ಕೆ ಆಗಮಿಸಲು ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆಯಲು ಮುಂದಾದಾಗ ಪ್ರಿಯಾಂಶು ಕುಮಾರ್ ಪೊಲೀಸರ ಕಪಾಳಕ್ಕೆ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ. ಈ ವೇಳೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ದ್ವಿಚಕ್ರ ವಾಹನವನ್ನು ಸೀಜ್ ಮಾಡಲಾಗಿತ್ತು ಎಂಬುದಾಗಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಜೊತೆಗೆ, ಈ ಸಂಬಂಧ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News