'ಪೊಲೀಸ್ ಭದ್ರತೆ ಇಲ್ಲದೇ ಮನೆಗೆ ಹೋಗು': ಸಿದ್ದರಾಮಯ್ಯಗೆ ಕಾನ್‌ಸ್ಟೆಬಲ್‌ ಸವಾಲು

Update: 2022-10-03 18:06 GMT

ವಿಜಯಪುರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭಾಷಣಕ್ಕೆ ವಿಜಯಪುರ ಗ್ರಾಮೀಣ ಠಾಣೆ ಕಾನ್‌ಸ್ಟೆಬಲ್‌ವೊಬ್ಬರು ವಿರೋಧ ವ್ಯಕ್ತಪಡಿಸಿ,  ಫೇಸ್‌ಬುಕ್‌ನಲ್ಲಿ ಕಮೆಂಟ್‌ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ತೀವ್ರ ಚರ್ಚೆಗೆ ಕಾರಣವಾಗಿದೆ.

‘ಪೊಲೀಸರಿಗೆ ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು’ ಎಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜಶೇಖರ ಖಾನಾಪುರ ಸವಾಲು ಹಾಕಿದ್ದಾರೆ ಎನ್ನಲಾಗಿದೆ.

‘ಸರ್ಕಾರಿ ಹುದ್ದೆಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕು, ಅದನ್ನು ಬಿಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಶುಕ್ರವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ‘ಭಾರತ ಐಕ್ಯತಾ ಯಾತ್ರೆ’ಯ  ಹಿನ್ನೆಲೆಯಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸಿದ್ದರಾಮಯ್ಯ,  ‘ಇನ್ನು ಆರು ತಿಂಗಳ ನಂತರ ರಾಜ್ಯದಲ್ಲಿ ಸರಕಾರ ಬದಲಾಗುತ್ತದೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಕೆಲವು ಪೊಲೀಸರಿಗೆ ಹೇಳಲು ಬಯಸುತ್ತೇನೆ, ನೀವು ಅವರ (ಬಿಜೆಪಿ)ಜತೆ ಶಾಮೀಲಾದರೆ ನಿಮಗೆ ತಕ್ಕ ಪಾಠ ಕಲಿಸುವ ಕಾಲ ಬರಲಿದೆ' ಎಂದು ಹೇಳಿದ್ದರು. 

 ಫೇಸ್ ಬುಕ್ ಕಮೆಂಟ್ ಸ್ಕ್ರೀನ್ ಶಾಟ್ 

----------------------------------------------------

''ದೂರು ಬಂದರೆ ಪರಿಶೀಲನೆ''

‘ಕಾನ್‌ಸ್ಟೆಬಲ್‌ ತಮ್ಮ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಮಾಡಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಸಂಬಂಧ ಇದುವರೆಗೆ ಯಾರೂ ದೂರು ಕೊಟ್ಟಿಲ್ಲ. ಕೊಟ್ಟರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಎಚ್‌.ಡಿ.ಆನಂದಕುಮಾರ್‌ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News