ಪರೇಶ್ ಮೇಸ್ತಾ ಹತ್ಯೆ ಅಲ್ಲ, ಆಕಸ್ಮಿಕ ಸಾವು ಎಂಬ CBI ವಿಚಾರಣಾ ವರದಿ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ: ಸಿದ್ದರಾಮಯ್ಯ

Update: 2022-10-04 07:41 GMT

ಬೆಂಗಳೂರು: ಹೊನ್ನಾವರ ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕವಾಗಿ ಸಾವು ಎಂದು ಉಲ್ಲೇಖಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ. 

''ಹೊನ್ನಾವರದ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ, ಆಕಸ್ಮಿಕ‌ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ 
ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು. ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ. ಬಿಜಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ'' ಎಂದು ಕಿಡಿಕಾರಿದ್ದಾರೆ. 

ಪ್ರಕರಣಕ್ಕೆ ಕೋಮು ಬಣ್ಣ ಬಳಿದಿದ್ದ   ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ಸಂಸದ ಅನಂತ ಕುಮಾರ್ ಹೆಗ್ಡೆ ಸೇರಿದಂತೆ ಹಲವರು ಮೇಸ್ತನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಅವರ ನೇತೃತ್ವದ ಅಂದಿನ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೂ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದರಿಂದ ಸಿದ್ದರಾಮಯ್ಯನವರ ಸರಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಬಳಿಕ ಈ ಪ್ರಕರಣದಲ್ಲಿ 5 ಮಂದಿ ಆರೋಪಿಗಳನ್ನೂ ಬಂಧಿಸಲಾಗಿತ್ತು. ಇದೀಗ ಈ ಬಗ್ಗೆ ವಿವರವಾದ ತನಿಖೆ ನಡೆಸಿದ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಇದನ್ನೂ ಓದಿ: ಪರೇಶ್ ಮೇಸ್ತಾ ಹತ್ಯೆ ನಡೆದಿಲ್ಲ, ಅದೊಂದು ಆಕಸ್ಮಿಕ ಸಾವು : ಬಿ ರಿಪೋರ್ಟ್ ಸಲ್ಲಿಸಿದ ಸಿಬಿಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News