ಪರೇಶ್ ಮೇಸ್ತಾ ಸಾವನ್ನು ರಾಜಕೀಯಗೊಳಿಸಿ, ದೊಂಬಿ ಎಬ್ಬಿಸಿದ್ದ ಬಿಜೆಪಿಯವರು ಸಮಾಜ ಘಾತಕರಲ್ಲವೇ?: ದಿನೇಶ್ ಗುಂಡೂರಾವ್

Update: 2022-10-04 08:31 GMT

ಬೆಂಗಳೂರು, ಅ.4: ''ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು ಸಿಬಿಐ ವರದಿ ನೀಡಿದೆ. ನಮ್ಮ ಸರಕಾರವಿದ್ದಾಗ ಸಂಭವಿಸಿದ್ದ ಮೇಸ್ತಾ ಸಾವಿಗೆ ಬಿಜೆಪಿ ನಾಯಕರು ಹಿಂದುತ್ವದ ಬಣ್ಣ ಕಟ್ಟಿ‌ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ, ಗಲಭೆ ಸೃಷ್ಟಿಸಿದ್ದರು. ಅಂದಿನ ಗಲಭೆಯಲ್ಲಿ ಐಜಿಪಿ ಕಾರಿಗೆ ಕಲ್ಲು ತೂರಿ ಲಾಟಿಚಾರ್ಜ್ ಕೂಡ ನಡೆದಿತ್ತು.‌ ಅಂದಿನ ದೊಂಬಿ ಮತ್ತು ಗಲಾಟೆಗೆ ಯಾರು ಹೊಣೆ?'' ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಗಳನ್ನು ಮಾಡಿರುವ ಅವರು, 'ಪರೇಶ್ ಮೇಸ್ತಾ ಸಾವನ್ನು ಧಾರ್ಮಿಕ ಹತ್ಯೆ ಎಂದು ಬಿಂಬಿಸಿದ್ದ ಬಿಜೆಪಿಯವರು ಇಡೀ ಕರಾವಳಿಯನ್ನೇ ಕೋಮುದಳ್ಳುರಿಗೆ ತಳ್ಳಿದ್ದರು.ಅಂದಿನ ನಮ್ಮ ಸರಕಾರ ಯಾವ ಹಿಂಜರಿಕೆಯೂ ಇಲ್ಲದೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈಗ ಸಿಬಿಐ, ಮೇಸ್ತಾ ಸಾವು ಸ್ವಾಭಾವಿಕ ಎಂದು ನ್ಯಾಯಾಲಯಕ್ಕೆ ವರದಿ ನೀಡಿದೆ. ಈಗ ಎಲ್ಲಿದ್ದಾರೆ ಬಿಜೆಪಿಯ ಕೂಗುಮಾರಿ ನಾಯಕರು?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು ಸಿಬಿಐ ತನಿಖೆಯಿಂದ ಗೊತ್ತಾಗಿದೆ. ಆದರೆ ಈ ಸಾವನ್ನು ರಾಜಕೀಯಗೊಳಿಸಿ ದೊಂಬಿ ಎಬ್ಬಿಸಿದ್ದ ಬಿಜೆಪಿಯವರು ನಿಜವಾದ ಸಮಾಜ ಘಾತಕರಲ್ಲವೆ? ಸುಳ್ಳು ಅಪಾದನೆ ಮಾಡಿದ ಶಾಂತಿ ಭಂಗ ಮಾಡಿದ್ದು ಅಪರಾಧವಲ್ಲವೆ? ಬಿಜೆಪಿಯವರಿಗೆ ಆತ್ಮಸಾಕ್ಷಿಯಿದ್ದರೆ ಬಹಿರಂಗ ಕ್ಷಮೆ ಕೇಳಲಿ'' ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News