ಕಾಂಗ್ರೆಸ್ಸಿಗರ ‘ಭಾರತ ಬಿಟ್ಟು ಓಡೋ ಯಾತ್ರೆ’: ನಳಿನ್ ಕುಮಾರ್ ಕಟೀಲ್ ಟೀಕೆ

Update: 2022-10-05 11:44 GMT

ಬೆಂಗಳೂರು. ಅ. 5:‘ಕಾಂಗ್ರೆಸ್ ಪಕ್ಷದ್ದು ‘ಭಾರತ ಜೋಡೋ ಯಾತ್ರೆ'ಯಲ್ಲ, ಅದು ‘ಭಾರತ ಬಿಟ್ಟುಓಡೋ ಯಾತ್ರೆ’ಯಾಗಿ ಪರಿವರ್ತನೆ ಹೊಂದಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಲೇವಡಿ ಮಾಡಿದ್ದಾರೆ.

ಬುಧವಾರ ಪ್ರಕಟನೆ ನೀಡಿರುವ ಅವರು, ‘ಗುಲಾಂ ನಬಿ ಆಝಾದ್ ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ಕೋಪದಿಂದಿರುವ ನಾಯಕರು ಜೊತೆಗೂಡಿ ಜಿ-23 ಗುಂಪು ರಚಿಸಿದ್ದರು. ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಅದು ಚೇತರಿಕೆ ಕಾಣಲಾರದು ಎಂಬುದನ್ನು ಮನಗಂಡ ಅನೇಕರು ಒಬ್ಬೊಬ್ಬರಾಗಿ ಈಗಾಗಲೇ ಆ ಪಕ್ಷಕ್ಕೆ ವಿದಾಯ ಹೇಳಿದ್ದಾರೆ' ಎಂದು ಟೀಕಿಸಿದ್ದಾರೆ.

‘ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ಮೂಲಕ ಗುರುತಿಸಿಕೊಂಡ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಭಿನ್ನಮತ ಹಾಗೂ ನಾಯಕತ್ವದ ಕೊರತೆಯಿಂದ ನೆಲಕಚ್ಚಲಿದೆ. ಪಕ್ಷ ತೊರೆಯುವ ನಾಯಕರನ್ನು ಒಂದೆಡೆ ಸೇರಿಸಿ ಜೋಡೋ ಮಾಡಬೇಕಿದ್ದ ರಾಹುಲ್ ತಮ್ಮ ಮುತ್ತಾತ ನೆಹರೂ ಅವರು ದೇಶವನ್ನು ಇಬ್ಭಾಗ ಮಾಡಿದ್ದನ್ನು ಮರೆತಿದ್ದಾರೆ. ಇದು ಜಾಣಮರೆವಲ್ಲದೆ ಮತ್ತೇನಲ್ಲ. ಆದರೆ, 130 ಕೋಟಿ ಜನರ ಹೆಮ್ಮೆಯ ಪ್ರಧಾನಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೆ ವಿಧಿಯನ್ನು ರದ್ದು ಮಾಡಿ ದೇಶ ಜೋಡಿಸುವ ಕಾರ್ಯ ಮಾಡಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

ಶಾಶ್ವತವಾಗಿ ಮೂಲೆಗುಂಪು: ‘ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಪಕ್ಷ. ಹಿಂದೂ ವಿರೋಧಿ, ಜಾತಿ-ಜಾತಿಗಳ ನಡುವೆ, ಮತೀಯ ಸಂಘರ್ಷ ಹೆಚ್ಚಿಸುವ ಪಕ್ಷವಾದರೆ, ಬಿಜೆಪಿ ಸದಾ ಜನಹಿತ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವ ಪಕ್ಷ ಎಂಬುದು ಜನರಿಗೆ ಅರಿವಾಗಿದೆ. ಕಾಂಗ್ರೆಸ್ 6 ದಶಕಗಳ ಭ್ರಷ್ಟಾಚಾರ , ಸಾಲು-ಸಾಲು ಹಗರಣಗಳನ್ನು ಗಮನಿಸಿದ ಜನತೆ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ಮೂಲೆಗುಂಪು ಮಾಡುವ ನಿರ್ಧಾರ ಮಾಡಿದ್ದಾರೆ' ಎಂದು ಕಟೀಲ್ ತಿಳಿಸಿದ್ದಾರೆ.

‘ಭಾರತ್ ಜೋಡೋ ಮೂಲಕ ಕರ್ನಾಟಕಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೇ ಇಲ್ಲಿನ ಕಾಂಗ್ರೆಸ್ ಮುಖಂಡರು ಎರಡು ತಂಡಗಳಾಗಿ ಸ್ವಾಗತ ಮಾಡಿದ್ದಾರೆ. ಸಿಎಂ ಕುರ್ಚಿಯ ಹಗಲುಕನಸು ಕಾಣುವ ಸಿದ್ದರಾಮಯ್ಯ ಒಂದೆಡೆ ಸ್ವಾಗತ ಕೋರಿದರೆ, ಜೈಲಿನತ್ತ ಮುಖ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೊಂದೆಡೆ ಸ್ವಾಗತಿಸಿದ್ದಾರೆ. ಇದು ಕಾಂಗ್ರೆಸ್ ಭಿನ್ನಮತಕ್ಕೆ ಸ್ಪಷ್ಟ ನಿದರ್ಶನ. ಇದನ್ನು ಜನತೆ ಗಮನಿಸಿದ್ದಾರೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಅನ್ಯಾಯ-ಅವಹೇಳನ ಮಾಡಿದ ಕಾಂಗ್ರೆಸ್, ಅವರನ್ನು ಕೇವಲ ಮತಬ್ಯಾಂಕಾಗಿ ಬಳಸಿಕೊಂಡಿತ್ತು. ಆದರೆ, ಬಿಜೆಪಿ ಅವರ ಪ್ರಮುಖ ಸ್ಥಳಗಳನ್ನು ಪಂಚಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಿದೆ. ರಾಜ್ಯದಲ್ಲೂ ಅವರು ಭೇಟಿ ಕೊಟ್ಟ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಮುಂದಾಗಿದೆ' ಎಂದು ಅವರು ವಿವರಿಸಿದ್ದಾರೆ.

ಭಯೋತ್ಪಾದನೆ ಭಾಗ್ಯ: ‘ಪಿಎಫ್‍ಐ ಮತ್ತು ಎಸ್‍ಡಿಪಿಐಯ ಮುಖಂಡರು ಮತ್ತು ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ರದ್ದು ಮಾಡಿದ್ದ ಸಿದ್ದರಾಮಯ್ಯರ ಸರಕಾರವು ಜನರಿಗೆ ‘ಪಿಎಫ್‍ಐ ಭಯೋತ್ಪಾದನಾ ಭಾಗ್ಯ’ ನೀಡಿತ್ತು. ಪಿಎಫ್‍ಐ ಮತ್ತು ಅದರ ಸಹ ಸಂಘಟನೆಗಳ ನಿಷೇಧ ಸಿದ್ದರಾಮಣ್ಣನಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಓಲೈಕೆ, ತುಷ್ಟೀಕರಣ ಮತ್ತು ಹಿಂದೂ ವಿರೋಧಿ ರಾಜಕಾರಣ ಮಾಡುತ್ತಲೇ ಬಂದಿರುವ ಸಿದ್ದರಾಮಣ್ಣ ಮತ್ತು ಡಿ.ಕೆ.ಶಿವಕುಮಾರ್ ಕುತಂತ್ರಗಳು ಮುಂದಿನ ಚುನಾವಣೆಯಲ್ಲಿ ಫಲ ಕೊಡುವುದಿಲ್ಲ'

-ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News