ಅಪರಾಧ ಕೃತ್ಯ ನಡೆದ ಆರಂಭದಲ್ಲೇ ಗುರುತು ಪತ್ತೆ ಪರೇಡ್ ನಡೆಸಿ: ಹೈಕೋರ್ಟ್ ಸೂಚನೆ

Update: 2022-10-05 14:43 GMT

ಬೆಂಗಳೂರು, ಅ.5: ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಗುರುತಿಸಲು ಆದಷ್ಟು ಬೇಗ ಪತ್ತೆ ಪರೇಡ್ ನಡೆಸಿದರೆ ಉತ್ತಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 

ಕಳ್ಳ ಸಾಗಣೆ ಕೇಸ್ ನಡೆದ ಹನ್ನೊಂದು ವರ್ಷಗಳ ನಂತರ ಗುರುತು ಪತ್ತೆ ಪರೇಡ್ ನಡೆಸಲು ತನಿಖಾಧಿಕಾರಿಗೆ ಅವಕಾಶ ನೀಡಿದ ಬೆಂಗಳೂರಿನ 5ನೆ ಎಸಿಎಂಎಂ ನ್ಯಾಯಾಲಯ ಆದೇಶ ಪ್ರಶ್ನಿಸಿ ಕೆ.ಉಮೇಶ್ ಶೆಟ್ಟಿ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ಕೃತ್ಯ ಎಸಗಿದ ವ್ಯಕ್ತಿಯನ್ನು ಗುರುತಿಸಲು ಆದಷ್ಟು ಬೇಗ ಪತ್ತೆ ಪರೇಡ್ ನಡೆಸಬೇಕು. ವಿಳಂಬವಾದಷ್ಟೂ ಸಾಕ್ಷಿಗಳು ತಮ್ಮ ಜ್ಞಾಪಕಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ, ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಲಿದೆ ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. 

ಬೆಂಗಳೂರಿನ ಬಸವೇಶ್ವರನಗರ ಪೊಲೀಸರು 2006ರಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಅಕ್ರಮ ಸಾಗಣೆ(ನಿಯಂತ್ರಣ) ಕಾಯ್ದೆ-1956 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ನಾಲ್ವರಲ್ಲಿ ಪೊನ್ನಪ್ಪನ ಮಗ ಉಮೇಶ್ ಶೆಟ್ಟಿ ಎಂಬಾತ ಮೊದಲ ಆರೋಪಿಯಾಗಿದ್ದ. ಜಾಮೀನು ಪಡೆದ ನಂತರ ಆತ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ವಿಚಾರಣಾ ಕೋರ್ಟ್ ಜಾಮೀನುರಹಿತ ವಾರಂಟ್ ಜಾರಿಗೊಳಿಸಿತ್ತು.

ಇದರಿಂದ, ಪೊಲೀಸರು ಅರ್ಜಿದಾರ ಉಮೇಶ್ ಶೆಟ್ಟಿ ವಿರುದ್ಧ ಎನ್‍ಬಿಡಬ್ಲ್ಯೂ ಜಾರಿಗೊಳಿಸಲು ಮುಂದಾಗಿದ್ದರು. ಆಗ ಅವರು, ತಾನು ಪೊನ್ನಪ್ಪನ ಮಗ ಉಮೇಶ್ ಶೆಟ್ಟಿಯಲ್ಲ. ತಮ್ಮ ತಂದೆಯ ಹೆಸರು ವಿಠಲ ಶೆಟ್ಟಿ ಹಾಗೂ ವಾರಂಟ್‍ನಲ್ಲಿ ಹೆಸರಿಸಿರುವ ವ್ಯಕ್ತಿ ತಾವಲ್ಲ ಎಂದಿದ್ದರು. ಇದರಿಂದ, ಸತ್ಯಾಸತ್ಯತೆ ಅರಿಯಲು ತನಿಖಾಧಿಕಾರಿಗಳು ಗುರುತು ಪತ್ತೆ ನಡೆಸಲು ಅನುಮತಿ ಕೋರಿದ್ದರು. ಆ ಮನವಿ ಪುರಸ್ಕರಿಸಿದ್ದ ವಿಚಾರಣಾ ಕೋರ್ಟ್, ಗುರುತು ಪತ್ತೆಗೆ ಅನುಮತಿ ನೀಡಿ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಉಮೇಶ್ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News