ಗಾಯಗೊಂಡಿರುವ ಆನೆ ಮರಿಗೆ ವೈದ್ಯಕೀಯ ಆರೈಕೆ ಒದಗಿಸುವಂತೆ ಸಿಎಂ ಬೊಮ್ಮಾಯಿಗೆ ರಾಹುಲ್ ಮನವಿ

Update: 2022-10-05 16:06 GMT

ಬೆಂಗಳೂರು, ಅ.5: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಯಗೊಂಡಿರುವ ಆನೆ ಮರಿಗೆ ತುರ್ತು ವೈದ್ಯಕೀಯ ಆರೈಕೆ ಒದಗಿಸುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ನಾನು ಮತ್ತು ಕಾಂಗ್ರೆಸ್ ಅಧ್ಯಕ್ಷರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ವಲ್ಪ ಸಮಯ ಭೇಟಿ ನೀಡಿದ್ದೆವು, ಅಲ್ಲಿ ಗಾಯಗೊಂಡ ಆನೆಯೊಂದು ತನ್ನ ತಾಯಿಯೊಂದಿಗಿರುವ ನೋವಿನ ದೃಶ್ಯವನ್ನು ನೋಡಿದೆವು. ಪುಟ್ಟ ಆನೆ ಮರಿಗೆ ಬಾಲ ಹಾಗೂ ಸೊಂಡಿಲು ಬಳಿ ತೀವ್ರವಾಗಿ ಗಾಯವಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಕೃತಿಯು ತನ್ನದೇ ಆದ ಹಾದಿಯನ್ನು ತೆಗೆದುಕೊಳ್ಳಲು ಅನುಮತಿಸಬೇಕು ಎಂಬ ದೃಷ್ಟಿಕೋನವಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೂ, ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ ಕೆಲವು ವಿನಾಯಿತಿಗಳನ್ನು ನೀಡಬೇಕಾಗುತ್ತದೆ. ಈ ಮರಿ ಆನೆಗೆ ನಿಸ್ಸಂದೇಹವಾಗಿ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಇದನ್ನೂ ಚಿತ್ರ: ಚಂದನವನಕ್ಕೆ ಮತ್ತೆ ಮರಳಿದ ರಮ್ಯಾ: ರಾಜ್‌ ಬಿ. ಶೆಟ್ಟಿ ಜೊತೆಗೆ ನೂತನ ಚಿತ್ರ

ಆದುದರಿಂದ, ನಾನು ರಾಜಕೀಯ ಗಡಿಗಳನ್ನು ದಾಟಿ, ಈ ಪುಟ್ಟ ಆನೆಯನ್ನು ಉಳಿಸಲು ನಿಮ್ಮ ಸಹಾನುಭೂತಿಯನ್ನು ಯಾಚಿಸುತ್ತಿದ್ದೇನೆ. ಈ ಮರಿ ಆನೆಗೆ ಸೂಕ್ತ ಚಿಕಿತ್ಸೆ ನೀಡಿದರೆ ಅದು ಬದುಕುಳಿಯುವ ವಿಶ್ವಾಸವಿದೆ. ಈ ಪುಟ್ಟ ಆನೆಯನ್ನು ಉಳಿಸಲು ನೀವು ಸಮಯೋಚಿತ ಸಹಾಯವನ್ನು ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

‘ಮಾತೃ ಪ್ರೇಮ. ಗಾಯಗೊಂಡು ಬದುಕಲು ಹೋರಾಟ ನಡೆಸುತ್ತಿರುವ ತನ್ನ ಮರಿಯ ಜೊತೆಗಿರುವ ಸುಂದರವಾದ ಆನೆಯನ್ನು ನೋಡಿ ನನಗೆ ಬಹಳ ದುಃಖವಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News