ರಮೇಶ್ ಜಾರಕಿಹೊಳಿ ಬಗ್ಗೆ BJP ನಾಯಕರಿಗೆ ಭಯ: ಸತೀಶ್ ಜಾರಕಿಹೊಳಿ

Update: 2022-10-05 15:48 GMT

ಬೆಳಗಾವಿ, ಅ.5: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಕೆಡವಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ, ಈಗಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆಯುವುದು ದೊಡ್ಡ ಮಾತಲ್ಲ. ಆದುದರಿಂದ, ಬಿಜೆಪಿ ನಾಯಕರಿಗೆ ರಮೇಶ್ ಜಾರಕಿಹೊಳಿ ಬಗ್ಗೆ ಭಯ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೊಮ್ಮೆ ಸಚಿವ ಸ್ಥಾನ ಪಡೆಯಲು ಕಾದು ಕುಳಿತಿರುವ ರಮೇಶ್ ಜಾರಕಿಹೊಳಿ ಸಿಟ್ಟಾಗಿ ಕಲ್ಲು ಹೊಡೆಯಬಹುದು ಎಂಬ ಭಯದಿಂದ, ಅವರಿಗೆ ಚಾಕೊಲೇಟ್ ತಿನ್ನಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ ಹೆಚ್ಚು ಶಾಸಕರನ್ನು ಗೆಲ್ಲಿಸುವ ಹೊಣೆಗಾರಿಕೆ ರಮೇಶ್ ಜಾರಕಿಹೊಳಿಗೆ ವಹಿಸಲು ಚಿಂತನೆ ನಡೆಯುತ್ತಿದೆ ಎಂದು ಕೇಳಿ ಬರುತ್ತಿರುವ ಮಾತುಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷವನ್ನು ಕಟ್ಟಿದ ಯಡಿಯೂರಪ್ಪ ಅವರನ್ನೆ ಮೂಲೆಗುಂಪು ಮಾಡಿರುವವರಿಗೆ ರಮೇಶ್ ಜಾರಕಿಹೊಳಿ ಯಾವ ಲೆಕ್ಕ. ಸುಮ್ಮನೆ ಅವರ ಮೂಗಿಗೆ ತುಪ್ಪು ಸವರುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.

ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ನಡೆಸುವಂತಹ ಪ್ರಶ್ನೆಯೆ ಉದ್ಭವಿಸುವುದಿಲ್ಲ. ಬಿಜೆಪಿ ನಾಯಕರು ಅವರಿಗೆ ಏನಿದ್ದರೂ ಸಮಾಧಾನಕರ ಬಹುಮಾನ ಕೊಡುತ್ತಾರೆ ಅಷ್ಟೇ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈವರೆಗೆ ಮೂರು ಬಾರಿ ಮಾತನಾಡಿದ್ದಾರೆ. ಈಗ ಮತ್ತೊಮ್ಮೆ ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತಲ್ಲೀನವಾಗಿದೆ ಎಂದು ಅವರು ಹೇಳಿದರು.

ಎಸ್ಟಿ ಮೀಸಲಾತಿ ವಿಚಾರ: ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ನಾವು ಮುಂದಿಟ್ಟಿರುವ ಬೇಡಿಕೆ ಕುರಿತು ಚರ್ಚಿಸಲು ಅ.7ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ವಪಕ್ಷಗಳ ಮುಖಂಡರ ಸಭೆಯನ್ನು ಕರೆಯಲಾಗಿದೆ. ಅಲ್ಲಿ ಮೀಸಲಾತಿ ಕುರಿತು ಕೆಲವು ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಈ ಸರಕಾರದಿಂದ ನಮಗೆ ಸಂಪೂರ್ಣ ನ್ಯಾಯ ಸಿಗುವ ವಿಶ್ವಾಸವಿಲ್ಲ. ಮೀಸಲಾತಿ ಕುರಿತು ಘೋಷಣೆ ಮಾಡಿದಂತೆ ಮಾಡಿ, ಮುಂದೆ ಕಾನೂನು ತೊಡಕು ಬರುವಂತೆ ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ನಿರ್ಣಯ ಆಗಬಹುದು ಎಂಬ ಆತಂಕ ನನಗಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಸರ್ವಪಕ್ಷ ನಾಯಕರ ಸಭೆಗೆ ಮುಂಚಿತವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿರುವ ಎಸ್ಸಿ, ಎಸ್ಟಿ ಸಮುದಾಯದ ಶಾಸಕರ ಸಭೆಯನ್ನು ಕರೆದು ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಆ ಸಭೆಯಲ್ಲಿ ಮೀಸಲಾತಿ ಕುರಿತು ಮಾಹಿತಿ ಒದಗಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News