ಕೆಐಒಸಿಎಲ್‌ನಿಂದ ವಿವಿಧ ಸಾರ್ವಜನಿಕ ಸೇವಾ ಯೋಜನೆಗಳಿಗೆ 2 ಕೋಟಿ ರೂ. ಕೊಡುಗೆ ಹಸ್ತಾಂತರ

Update: 2022-10-06 15:12 GMT

ಮಂಗಳೂರು, ಅ.6; ಸ್ಥಳೀಯ ಉದ್ಯೋಗದ ಬೇಡಿಕೆಗಳನ್ನು ಈಡೇರಿಸಿ, ಯಾವುದೇ ರೀತಿಯ ವಿರೋಧಗಳು ವ್ಯಕ್ತವಾಗದಂತೆ  ಕೆಐಒಸಿಎಲ್ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಭಿಪ್ರಾಯ ಪಟ್ಟರು.

ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿ ಎಲ್) ಸಿಎಸ್‍ಆರ್ ನಿಧಿಯಡಿ ವಿವಿಧ ಸಂಸ್ಥೆಗಳು, ಇಲಾಖೆಗಳಿಗೆ ಒಟ್ಟು 2 ಕೋಟಿ ರೂ.ಗಳ ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.

ಯಾವುದೇ ಸ್ಥಳದಲ್ಲಿ ಹೊಸ ಉದ್ದಿಮೆಗಳು ಆರಂಭವಾದಾಗ ಸ್ಥಳೀಯರಿಂದ ಉದ್ಯೋಗದ ಬೇಡಿಕೆಗಳು ಬರುವುದು ಸಹಜ.  ಆ ಬೇಡಿಕೆಗಳನ್ನು ಪೂರೈಸಿದ ಸಂಸ್ಥೆ ಕೆಐಒಸಿಎಲ್. ಕೋವಿಡ್ ಸೋಂಕಿನ ಸಂದರ್ಭದಲ್ಲಿ ಮೂರು ಕಡೆಗಳಲ್ಲಿ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಘಟಕ, ವಿವಿಧೆಡೆ ಕಿಟ್, ಆಂಬುಲೆನ್ಸ್ ನೀಡುವ ಮೂಲಕ ನೆರವಾಗಿದೆ. ಪ್ರಸ್ತುತ ಆರೋಗ್ಯ, ಸೇವೆ, ರಕ್ಷಣೆ, ಶಿಕ್ಷಣ ಹೀಗೆ ವಿಂಗಡಣೆ ಮಾಡಿಕೊಂಡು ಸಿಎಸ್‍ಆರ್ ನಿಧಿಯನ್ನು ವಿತರಿಸಿದೆ ಎಂದು ಅವರು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಮಾತನಾಡಿ, ‘ಕೆಐಒಸಿಎಲ್ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಸ್ಥಾಪನೆಗೆ ಸಂಸ್ಥೆ ನೆರವು ನೀಡಿದೆ, ಆ ಮೂಲಕ ಕಿಡ್ನಿ ಸಮಸ್ಯೆ ಎದುರಿಸುವ ರೋಗಿಗಳ ಚಿಕಿತ್ಸೆಗೆ ನೆರವಾಗುತ್ತಿದೆ, ಡಯಾಲಿಸಿಸ್‍ಗೆ ಬರುವವರು ಕಾಯುವ ಸ್ಥಿತಿ ಇರುವುದಿಲ್ಲ, ಮಕ್ಕಳ ಸಹಾಯವಾಣಿಗೆ ತೀರಾ ಅಗತ್ಯವಿದ್ದ ವಾಹನ ಖರೀದಿಗೆ ಕೆಐಒಸಿಎಲ್ ಧನ ಸಹಾಯ ಒದಗಿಸಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು. ಕೆಐಒಸಿಎಲ್ ಸಿಎಂಡಿ ಸಾಮಿನಾಥನ್ ಮಾತನಾಡಿ, ‘ಸಂಸ್ಥೆಯ ಕಳೆದ ವರ್ಷ ಕೂಡ ಸಿಎಸ್‍ಆರ್ ನಿಧಿಯಲ್ಲಿ ಸಾರ್ವಜನಿಕ ಕಾರ್ಯಗಳಿಗೆ ನೆರವು ನೀಡಿದೆ ಎಂದರು.

ವೆನ್ಲಾಕ್ ಆಸ್ಪತ್ರೆಯ ಡಯಾಲಿಸಿಸ್ ಘಟಕ, ಪುತ್ತೂರು ಮಣಿಕರ ಶಾಲೆಯ ಎರಡು ಕೊಠಡಿ ನಿರ್ಮಾಣ, ಕಾವೂರು ಪದವಿ ಪೂರ್ವ ಕಾಲೇಜಿನ ಎರಡು ಕೊಠಡಿ ನಿರ್ಮಾಣ, ಮಕ್ಕಳ ಸಹಾಯವಾಣಿ ಘಟಕಕ್ಕೆ ವಾಹನ ಖರೀದಿ, ವೆನ್ಲಾಕ್ ಆಸ್ಪತ್ರೆ ಕಟ್ಟಡ ದುರಸ್ತಿ, ಕುತ್ತಾರ್‍ನ ಮಂಗಲಾ ಸೇವಾ ಸಮಿತಿ, ಬಂಟ್ವಾಳ ವಾಮಪದವು ಸಮುದಾಯ ಆರೋಗ್ಯ ಕೇಂದ್ರದ ಎಕ್ಸರೇ ಯಂತ್ರ ಖರೀದಿ, ಪೊಲೀಸ್ ಕ್ವಾರ್ಟರ್ಸ್  ಕೌನ್ಸೆಲಿಂಗ್ ಹಾಲ್ ದುರಸ್ತಿ, ಭಾರತಿ ಗೋಶಾಲೆ ಸೇರಿದಂತೆ ವಿವಿಧ ಇಲಾಖೆ, ಸಂಸ್ಥೆಗಳಿಗೆ ಒಟ್ಟು  2 ಕೋಟಿ ರೂ.ಗಳ ಮೊತ್ತದ   ಚೆಕ್ ನ್ನು ಸಂಸದರ ಮೂಲಕ  ಹಸ್ತಾಂತರಿಸಿದರು.

ಕೆಐಒಸಿಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ರಾಮಕೃಷ್ಣ ರಾವ್, ಹಣಕಾಸು ವಿಭಾಗದ ನಿರ್ದೇಶಕ ಸ್ವಪನ್ ಕುಮಾರ್, ಉತ್ಪಾದನೆ ಮತ್ತು ಯೋಜನೆ ವಿಭಾಗದ ನಿರ್ದೇಶಕ ಕೆ.ವಿ.ಭಾಸ್ಕರ್ ರೆಡ್ಡಿ, ವಾಣಿಜ್ಯ ವಿಭಾಗದ ನಿರ್ದೇಶಕ ವಿನಯ್ ಕೃಷ್ಣ ಮೊಹಪಾತ್ರ, ಎಚ್‍ಆರ್ ವಿಭಾಗದ ಹಿರಿಯ ವ್ಯವಸ್ಥಾಪಕ ರಾದ ಜಿ.ವಿ.ಕಿರಣ್, ಎಸ್.ಮುರುಗೇಶ್  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News