ಜಮೀನು ಕಬಳಿಕೆ ಆರೋಪ: ಸಚಿವ ಶ್ರೀರಾಮುಲು ರಾಜೀನಾಮೆಗೆ ಮಾಜಿ ಸಂಸದ ಉಗ್ರಪ್ಪ ಆಗ್ರಹ

Update: 2022-10-07 16:15 GMT
 ವಿ.ಎಸ್.ಉಗ್ರಪ್ಪ

ಬೆಂಗಳೂರು, ಅ.7: ಸರಕಾರಿ ಹಾಗೂ ಸಾರ್ವಜನಿಕ ಸ್ವತ್ತು ಲಪಟಾಯಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ನಲ್ಲಿ ಬಳ್ಳಾರಿ ಲೋಕಾಯುಕ್ತ ಪೊಲೀಸರು ಸಚಿವ ಶ್ರೀರಾಮುಲು, ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿ ಬಿ.ಶಿವಪ್ಪ, ತಹಶೀಲ್ದಾರ್ ಸೇರಿದಂತೆ 11 ಜನರ ಮೇಲೆ ಆರೋಪಪಟ್ಟಿ ಹಾಕಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮುಲು ಜಾಮೀನು ತೆಗೆದುಕೊಂಡು ಓಡಾಡುತ್ತಿದ್ದಾರೆ. ಕಳೆದ ತಿಂಗಳು 17ರಂದು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ವರ್ಗಾವಣೆಯಾಗಿ ವಿಚಾರಣೆ ನಡೆದಿದೆ ಎಂದರು. 

ಆಕುಲ ಲಕ್ಷ್ಮಮ್ಮ ಎಂಬವರು 17.25 ಎಕರೆಯನ್ನು 2002ರ ಅ.24ರಂದು ಗಾಲಿ ಜನಾರ್ದನ ಅವರ ಮಾವ ಪರಮೇಶ್ವರ ರೆಡ್ಡಿಗೆ ಎಕರೆಗೆ 2 ಲಕ್ಷದಂತೆ ಮಾರಾಟ ಮಾಡಿದ್ದರು. ಅದೇ ದಿನ ಆಕುಲ ಲಕ್ಷ್ಮಮ್ಮ ಹಾಗೂ ಕುಟುಂಬದವರು ಶ್ರೀರಾಮುಲು ಅವರಿಗೆ 27.5 ಎಕರೆಯನ್ನು ಮಾರಾಟ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಉಗ್ರಪ್ಪ ತಿಳಿಸಿದರು.

ಈ ಜಾಗದಲ್ಲಿ ನದಿ ಕಾಲುವೆ ಕಾಮಗಾರಿಗೆ 10 ಎಕರೆ ಜಾಗ ಸ್ವಾಧೀನವಾಗಿದೆ ಹಾಗೂ ಪರಮೇಶ್ವರ ರೆಡ್ಡಿ ಉಳಿದ ಜಮೀನು ಖರೀದಿಸಿದ್ದಾರೆ ಎಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಮಾರಾಟ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿ, ಆಕುಲ ಲಕ್ಷ್ಮಮ್ಮ ಹಾಗೂ ಅವರ ಕುಟುಂಬದವರು ನ್ಯಾಯಾಲಯಕ್ಕೆ ಹಾಜರಾಗದೇ, ಅರ್ಜಿ ಹಾಕಿದ 39 ದಿನಗಳ ಅಂತರದಲ್ಲಿ ಶ್ರೀರಾಮುಲು ಪರವಾಗಿ ಡಿಕ್ರಿ ಆಗುತ್ತದೆ ಎಂದು ಅವರು ಹೇಳಿದರು.

ನಂತರ ಪರಮೇಶ್ವರ ರೆಡ್ಡಿ 17.5 ಎಕರೆ ಜಮೀನನ್ನು ಕೃಷಿಯೇತ್ತರ ಜಮೀನಾಗಿ ಪರಿವರ್ತಿಸಿ, ಅದನ್ನು ಗಿಫ್ಟ್ ಡೀಡ್ ಆಗಿ ತಮ್ಮ ಪುತ್ರಿ(ಜನಾರ್ದನ ರೆಡ್ಡಿ ಪತ್ನಿ)ಗೆ 2006ರ ಮಾ.21ರಂದು ನೀಡಿದ್ದಾರೆ. ಶ್ರೀರಾಮುಲು ತಮ್ಮ ಪರವಾಗಿ ಆಗಿರುವ ಡಿಕ್ರಿ ಆಧಾರದ ಮೇಲೆ 2009ರಲ್ಲಿ ಅರ್ಜಿ ಹಾಕಿ, ಸೇಲ್ ಡೀಡ್ ಅನ್ನು ನ್ಯಾಯಾಲಯದ ಮೂಲಕ ಪಡೆದಿದ್ದಾರೆ. 2011ರ ಫೆ.2ರಲ್ಲಿ ಶ್ರೀರಾಮುಲು 27.25 ಎಕರೆ ಜಮೀನನ್ನು ಕಂದಾಯ ನಿರೀಕ್ಷಕ, ತಹಶೀಲ್ದಾರ್, ಎಸಿ, ಡಿಸಿ ಅಧಿಕಾರಿಗಳನ್ನು ಬಳಸಿ ಪರಿವರ್ತನೆ ಮಾಡಿಸಿಕೊಂಡಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು.

ಸರಕಾರಿ ಜಮೀನನ್ನು ಆಕುಲ ಲಕ್ಷ್ಮಮ್ಮ ಅವರ ಜಮೀನು ಎಂದು ತಮ್ಮ ಹೆಸರಿಗೆ ಶ್ರೀರಾಮುಲು ಮಾಡಿಸಿಕೊಂಡಿದ್ದಾರೆ. ಅಲ್ಲಿ ನಿರ್ಮಾಣವಾಗಿದ್ದ ಮನೆಗಳನ್ನು ಒಡೆದು ಹಾಕಿ ಕಾಂಪೌಂಡ್ ಹಾಕಿಕೊಂಡಿದ್ದಾರೆ. ಅತ್ತ ಕಾಲುವೆಯ ಒಂದು ಭಾಗದಲ್ಲಿ ಆಕುಲ ಲಕ್ಷ್ಮಮ್ಮ ಅವರಿಗೆ ಸೇರಿದ್ದ 17.5 ಎಕರೆಯನ್ನು ಜನಾರ್ದನ ರೆಡ್ಡಿ ಅವರ ಪತ್ನಿ, ರುಕ್ಮಿಣಿ ಲೇಔಟ್ ಮಾಡಿಕೊಂಡಿದ್ದರೆ, ಕಾಲುವೆಯ ಮತ್ತೊಂದು ಭಾಗದಲ್ಲಿ ಆಕುಲ ಲಕ್ಷ್ಮಮ್ಮ ಅವರ ಹೆಸರಿನಲ್ಲಿ ಸರಕಾರಿ ಜಮೀನನ್ನು ಕಬಳಿಸಲಾಗಿದೆ ಎಂದು ಅವರು ದೂರಿದರು.

ಈ ಸಂಬಂಧ 2013ರ ಜೂ.14ರಂದು ದಾಖಲಾದ ಖಾಸಗಿ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯವು ಬಳ್ಳಾರಿ ಲೋಕಾಯುಕ್ತದಿಂದ ತನಿಖೆಗೆ ಆದೇಶಿಸುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ಮಾ.31ರಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಉಗ್ರಪ್ಪ ಹೇಳಿದರು. 

ಕಳೆದ ತಿಂಗಳ 17ರಂದು ಪ್ರಕರಣದ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಶ್ರೀರಾಮುಲು ಯಾವ ರೀತಿ ಅಧಿಕಾರ ಹಾಗೂ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಪ್ರಸ್ತಾಪವಾಗಿದೆ. ಈಗ ಆ ಜಮೀನಿನ ಬೆಲೆ 1 ಎಕರೆಗೆ 1 ಕೋಟಿಯಷ್ಟಾಗಿದ್ದು 300 ಕೋಟಿಯಷ್ಟು ಅವ್ಯವಹಾರ ನಡೆದಿದೆ. ಆರೋಪ ಹೊತ್ತಿರುವ ಶ್ರೀರಾಮುಲು ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ನಾವು ಒತ್ತಾಯ ಮಾಡುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News