ಮಲೆನಾಡಿನಲ್ಲಿ ಸೇತುವೆ, ಕಾಲುಸಂಕಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅಡ್ಡಿ: ಶಾಸಕ ಟಿ.ಡಿ.ರಾಜೇಗೌಡ ಆರೋಪ

Update: 2022-10-07 17:40 GMT

ಚಿಕ್ಕಮಗಳೂರು, ಅ.10: ಅರಣ್ಯ ಇಲಾಖೆಯ ಅವೈಜ್ಞಾನಿಕ ಕಾನೂನುಗಳಿಂದಾಗಿ ಮಲೆನಾಡಿನ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತಿದೆ. ಕುದುರೆಮುಖ ಉದ್ಯಾನವನ ವ್ಯಾಪ್ತಿಯಲ್ಲಿ ಸೇತುವೆ ಸೇರಿದಂತೆ ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ಇಲಾಖೆ ಕಾನೂನುಗಳು ಅಡ್ಡಿಯಾಗಿವೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿರುವ ಹರೇಬೀಳು, ಸುಂಕದ ಮಕ್ಕಿ ಗ್ರಾಮಗಳ ಸಂಪರ್ಕದ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆಂಬ ಗ್ರಾಮಸ್ಥರ ಆರೋಪ ಸಂಬಂಧ ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಕಾಲುಸಂಕಗಳ ನಿರ್ಮಾಣಕ್ಕೆ ರಾಜ್ಯ ಸರಕಾರ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಹೀಗಾದರೇ ಮಲೆನಾಡಿನ ಅಭಿವೃದ್ಧಿ ಹೇಗೆ ಸಾಧ್ಯ? ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದರು.

ಜಿಲ್ಲೆಯಲ್ಲಿರುವ ಅರಣ್ಯ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಗಮನಕ್ಕೂ ತರಲಾಗಿದೆ. ಅರಣ್ಯ ಸಮಸ್ಯೆ ಕುರಿತು ವಿಶೇಷ ಸಭೆ ಕರೆಯುವುದಾಗಿ ಸಚಿವರು ಭರವಸೆಯನ್ನು ನೀಡಿದ್ದಾರೆ. ಅದು ಸಾಧ್ಯವಾಗದಿದ್ದರೇ ಅರಣ್ಯ ಇಲಾಖೆ ವಿರುದ್ಧ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಮಲೆನಾಡು ಭಾಗದಲ್ಲಿ ಕಾಲುಸಂಕಗಳ ಸಮಸ್ಯೆ ಇದ್ದು, ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾಲುಸಂಕ ನಿರ್ಮಾಣಕ್ಕೆ 13 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ 5ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಅನುದಾನದಲ್ಲಿ ಕೆಲ ಗ್ರಾಮಗಳಲ್ಲಿ ಕಾಲುಸಂಕ ನಿರ್ಮಾಣ ಮಾಡಲಾಗಿದೆ. ಕೆಲವೆಡೆ ನಿರ್ಮಾಣ ಕಾಮಗಾರಿ ಬಾಕಿ ಇದೆ. ಕಾಲುಸಂಕ ಅಗತ್ಯವಿರುವ ಗ್ರಾಮಗಳಲ್ಲಿ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಮಲೆನಾಡು ಭಾಗದ ಅಭಿವ್ಥದ್ಧಿಗೆ ಅರಣ್ಯ ಇಲಾಖೆ ತೊಡಕಾಗಿದೆ. ಅಧಿಕಾರಿಗಳು ಕಾನೂನು ಹೇಳುತ್ತಾ ಹೋದರೇ ಜನರ ಸಮಸ್ಯೆ ನಿವಾರಣೆಯಾಗುವುದು ಯಾವಾಗ?, ಶೃಂಗೇರಿ ಕ್ಷೇತ್ರದ ಕುಗ್ರಾಮಗಳ ಜನರಿಗೆ ಅನುಕೂಲವಾಗಲೆಂದು ಸೇತುವೆ ನಿರ್ಮಾಣಕ್ಕೆ ಮುಂದಾದರೇ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಹಾಗಾ ಕೆಲಸಗಳು ಅರ್ಧಕ್ಕೆ ಸ್ಥಗಿತಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸ್ಥಳೀಯ ವಾಸ್ತವಾಂಶಗಳನ್ನು ತಿಳಿದು ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ಸರಕಾರ ಮಲೆನಾಡು ಭಾಗರದ ರೈತರ ಹಿತದೃಷ್ಟಿಯಿಂದ 4(1) ನೋಟೀಫಿಕೇಶನ್ ಹಿಂಪಡೆಯಬೇಕಿದೆ. ಅರಣ್ಯ ಇಲಾಖೆ ಕಿರುಕುಳದ ವಿರುದ್ಧ ಈಗಾಗಲೇ ಹೋರಾಟ ನಡೆಸಲಾಗುತ್ತಿದೆ ಎಂದರು.

ಅತಿವೃಷ್ಟಿಯಿಂದ ಶೃಂಗೇರಿ ಕ್ಷೇತ್ರದಲ್ಲಿ 650 ಕೋಟಿ ರೂ. ನಷ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೀವರಾಜ್ ಕೂಡ ಇದ್ದರು. ಅಧಿವೇಶನದಲ್ಲಿ ಪರಿಹಾರ ಪ್ರಸ್ತಾಪಿಸಿದರೇ ಕೈಮೇಲೆತ್ತಿ ದೇವರೆ ಗತಿ ಎನ್ನುತ್ತಾರೆ. ಅತಿವೃಷ್ಟಿ ಪರಿಹಾರಕ್ಕೆ ಸರಕಾರದಿಂದಿ ಬಿಡಿಗಾಸು ಬಂದಿಲ್ಲ ಎಂದು ಇದೇ ವೇಳೆ ಶಾಸಕ ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಪಂ ಅಧಿಕಾರ ಮೊಟಕು: ರಾಜ್ಯ ಸರಕಾರ ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ಚುನಾವಣೆ ಮೊದಲು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಬಿಜೆಪಿಯವರ ಸುಳ್ಳು ಮಾತುಗಳನ್ನು ನಂಬಿ ಮತ ನೀಡಿದವರು ಈಗ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರು ಇನ್ನಾದರು ಎಚ್ಚೆತ್ತುಕೊಳ್ಳಬೇಕು ಎಂದು ರಾಜೇಗೌಡ ಹೇಳಿದರು.

ಅಡಿಕೆ ಬೆಳೆಗಾರರ ನೆಮ್ಮದಿ ಹಾಳು ಮಾಡುತ್ತಿರುವ ಸರಕಾರ: ಅಡಿಕೆ ಬೆಳೆಗಾರರು ಅನೇಕ ಸಮಸ್ಯೆಗಳ ನಡುವೆ ಅಲ್ಪಸ್ವಲ್ಪ ಆದಾಯದೊಂದಿಗೆ ನೆಮ್ಮದಿ ಜೀವನ ಕಟ್ಟಿ ಕೊಂಡಿದ್ದರು. ಆದರೆ, ಕೇಂದ್ರ ಸರಕಾರ ಅಡಿಕೆಯನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಮೂಲಕ ಬೆಳೆಗಾರರ ನೆಮ್ಮದಿ ಬದುಕಿಗೆ ಸಂಚಕಾರ ತಂದಿದೆ. ಅಡಿಕೆ ಹಳದಿ ಎಲೆರೋಗ, ಎಲೆಚುಕ್ಕಿರೋಗ ಬಾಧೆಯಿಂದ ಬೆಳೆಗಾರರ ಬದುಕು ದುಸ್ತರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಡಿಕೆ ಆಮದು ಮಾಡಿಕೊಳ್ಳುವುದರಿಂದ ಸ್ಥಳೀಯವಾಗಿ ಅಡಿಕೆ ಬೆಲೆಯಲ್ಲಿ ಕುಸಿತ ಉಂಟಾಗಿ ಬೆಳೆಗಾರರು ನಷ್ಟ ಅನುಭವಿಸುತ್ತಾರೆ. ಬಿಜೆಪಿ ಸರಕಾರ ರೈತರ ವಿರೋಧಿ ಸರಕಾರ ಎಂಬುದು ಇದರಿಂದ ಸ್ಪಷ್ಟವಾಗುತ್ತಿದ್ದು, ಬೆಳೆಗಾರರು ತಿರುಗಿಬೀಳುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ರಾಜೇಗೌಡ ಹೇಳಿದರು.

ಮತ್ತೆ ಬೆದರಿಕೆ ಕರೆ ಬಂದಿಲ್ಲ: ಅರಣ್ಯ ಸಮಸ್ಯೆಯಿಂದ ಮಲೆನಾಡಿನ ಜನರು ಬೇಸತ್ತು ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಇತ್ತೀಚೆಗೆ ನಗರದಲ್ಲಿ ನಡೆದ ಜಿಪಂ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ್ದೆ, ಇದು ಸತ್ಯ. ಮತ್ತೆ ಜೀವ ಬೆದರಿಕೆ ಕೆರೆಗಳು ಬಂದಿಲ್ಲ. ಈ ಸಂಬಂಧ ಯಾವುದೇ ಕಾರಣಕ್ಕೂ ದೂರು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿ ಶಾಸಕ ಟಿ.ಡಿ.ರಾಜೇಗೌಡ, ದೂರು ನೀಡಿದರೇ ಪ್ರಕರಣ ದಾಖಲಾಗುತ್ತದೆ. ನ್ಯಾಯಾಲಯದಿಂದ ಜಾಮೀನು ಪಡೆಯುತ್ತಾರೆ, ಇದರಿಂದ ಮಲೆನಾಡಿನ ಜನರ ಸಮಸ್ಯೆ ಪರಿಹಾರವಾಗುವುದಿಲ್ಲ. ಜನರಿಗೆ ಅನ್ಯಾಯವಾದಾಗ ಹೀಗೆ ಮಾತನಾಡುವುದು, ಬೆದರಿಕೆ ಹಾಕುವುದು ಸಹಜ, ಅವರು ಕೇಳುವುದರಲ್ಲೂ ನ್ಯಾಯವಿದೆ. ಜನಪ್ರತಿನಿಧಿಗಳಾದ ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಜಿಲ್ಲಾಡಳಿತ ಮತ್ತು ಸರಕಾರ ಸಮಸೆಗಳ ಪರಿಹಾರಕ್ಕೆ ಮುಂದಾಗಬೇಕಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News