ಕೊಳ್ಳೇಗಾಲ ನಗರಸಭೆ ಉಪ ಚುನಾವಣೆ | ಅನರ್ಹಗೊಂಡ ಏಳು ಸದಸ್ಯರು ಸ್ಪರ್ಧಿಸುವಂತಿಲ್ಲ: ರಾ. ಚುನಾವಣಾ ಆಯೋಗ

Update: 2022-10-08 05:34 GMT

ಚಾಮರಾಜನಗರ, ಅ.8: ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಎಸ್ಪಿ(BSP) ಪಕ್ಷದ ವಿಪ್‌ ಉಲ್ಲಂಘಿಸಿದ ಕಾರಣಕ್ಕೆ ಅನರ್ಹಗೊಂಡಿರುವ ಏಳು ಸದಸ್ಯರು ಈ ತಿಂಗಳು ನಡೆಯುವ ನಗರಸಭೆಯ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ.

ಈ ಬಗ್ಗೆ ರಾಜ್ಯ ಚುನಾವಣಾ ಆಯೋಗವು ಚಾಮರಾಜನಗರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ. ಕೊಳ್ಳೇಗಾಲ ನಗರಸಭೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಅ.28ರಂದು ಉಪ ಚುನಾವಣೆ ನಡೆಯಲಿದೆ. ಆದರೆ ಈ ಚುನಾವಣೆಗೆ 2021ರ ಸೆಪ್ಟಂಬರ್ ನಲ್ಲಿ ಅನರ್ಹಗೊಂಡಿರುವ ಸದಸ್ಯರಾದ ಗಂಗಮ್ಮ, ನಾಗಮಣಿ, ನಾಸಿರ್ ಶರೀಫ್, ಪವಿತ್ರಾ, ಪ್ರಕಾಶ್, ರಾಮಕೃಷ್ಣ ಹಾಗೂ ನಾಗಸುಂದ್ರಮ್ಮ ಸ್ಪರ್ಧಿಸುವಂತಿಲ್ಲ. ಈ ಸದಸ್ಯರ ಅನರ್ಹತೆಯ ಅವಧಿಯು ಅವರು ಪದಾವಧಿ ಮುಕ್ತಾಯಗೊಳ್ಳುವವರೆಗೆ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿರುವುದರಿಂದ ಅವರು ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 2020ರ ಅಕ್ಟೋಬರ್‌ 29ರಂದು ನಡೆದಿದ್ದ ಚುನಾವಣೆಯ ವೇಳೆ  ಬಿಎಸ್ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಸಂಬಂಧ ಪಕ್ಷದ  ಎಲ್ಲ ಸದಸ್ಯರಿಗೂ ವಿಪ್‌ ಜಾರಿಗೊಳಿಸಿತ್ತು. ಆದರೆ ವಿಪ್= ಉಲ್ಲಂಘಿಸಿದ್ದ ಸದಸ್ಯರಾದ ಗಂಗಮ್ಮ-6ನೇ ವಾರ್ಡ್, ಎಲ್‌.ನಾಗಮಣಿ -2ನೇ ವಾರ್ಡ್‌, ನಾಸಿರ್‌ ಶರೀಫ್‌ -7ನೇ ವಾರ್ಡ್‌, ಎನ್‌.ಪವಿತ್ರಾ -13ನೇ ವಾರ್ಡ್, ಪ್ರಕಾಶ್‌ -21ನೇ ವಾರ್ಡ್‌, ರಾಮಕೃಷ್ಣ -25ನೇ ವಾರ್ಡ್‌, ನಾಗಸುಂದ್ರಮ್ಮ -26ನೇ ವಾರ್ಡ್‌ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ(BJP) ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಗಂಗಮ್ಮ ಅಧ್ಯಕ್ಷೆಯಾಗಿಯೂ ಆಯ್ಕೆಗೊಂಡಿದ್ದರು. ಈ ನಡುವೆ ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ಧ  ಬಿಎಸ್ಪಿ ಸದಸ್ಯೆ ಜಯಮೇರಿ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ನಗರಸಭೆ ಆಯುಕ್ತರಿಗೆ ದೂರು ನೀಡಿದ್ದರು. ಅದರಂತೆ ಆಯುಕ್ತರು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ರವಾನಿಸಿದ್ದರು. ಎಂಟು ತಿಂಗಳ  ಬಳಿಕ ಅಂದರೆ 2021ರ ಸೆಪ್ಟಂಬರ್ 6ರಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಸದಸ್ಯರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿತ್ತು.

ಇದನ್ನೂ ಓದಿ: BSP ವಿಪ್ ಉಲ್ಲಂಘಿಸಿ BJP ಬೆಂಬಲಿಸಿದ್ದ ಕೊಳ್ಳೇಗಾಲ ನಗರಸಭೆಯ 7 ಮಂದಿ ಸದಸ್ಯರ ಮೇಲ್ಮನವಿ ಹೈಕೋರ್ಟ್ ನಿಂದ ವಜಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News