ಬೀದಿಪಾಲಾಗಿರುವ 90 ಅಲೆಮಾರಿ ಕುಟುಂಬಗಳು; ನಿವೇಶನಕ್ಕಾಗಿ ಆಗ್ರಹಿಸಿ ಅಹೋರಾತ್ರಿ ಧರಣಿ
ಬೆಂಗಳೂರು, ಅ.8: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕೆರೆ ಬದಿಯಲ್ಲಿ ತಮ್ಮ ಜೀವನ ಕಟ್ಟಿಕೊಂಡಿದ್ದ ಸುಮಾರು 90 ಅಲೆಮಾರಿ ಸಮುದಾಯದ ಕುಟುಂಬಗಳು ಇದೀಗ ಬೀದಿ ಪಾಲಾಗಿದ್ದು, ಸರಕಾರದಿಂದ ನಿವೇಶನ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಹುಳಿಯಾರು ಹೋಬಳಿಯ ನಾಡಕಚೇರಿ ಎದುರು ಕೈಗೊಂಡಿರುವ ಅಹೋರಾತ್ರಿ ಧರಣಿ 8ನೇ ದಿನಕ್ಕೆ ಕಾಲಿರಿಸಿದೆ.
ಅಲೆಮಾರಿ ಸಮುದಾಯದವರು ಹುಳಿಯಾರು ಕೆರೆಯ ಒಂದು ಬದಿಯಲ್ಲಿ ಸುಮಾರು 40 ವರ್ಷಗಳಿಂದ ಟೆಂಟ್‍ಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಅಲ್ಲಿಯೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ನೀರಲ್ಲದೆ ಬತ್ತಿ ಹೋಗಿದ್ದ ಹುಳಿಯಾರು ಕೆರೆಯು ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಾಗೂ ಹೇಮಾವತಿ ಜಲಾಶಯದ ನೀರು ಹೊರಗೆ ಬಿಡುತ್ತಿರುವುದರಿಂದ ತುಂಬಿದೆ.
ಇದರಿಂದಾಗಿ, ಕೆರೆಯ ಬದಿಯಲ್ಲಿ ನಿರ್ಮಿಸಿಕೊಂಡಿದ್ದ ಅಲೆಮಾರಿ ಸಮುದಾಯದವರ ಮನೆಗಳಿಗೆ ತೀವ್ರ ಹಾನಿಯಾಗಿದೆ. ಕೆಲವು ಮನೆಗಳು ಬಿದ್ದು ಹೋಗಿದ್ದರೆ, ಇನ್ನೂ ಹಲವು ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಸಮೀಪದ ಖಾಲಿ ಜಾಗದಲ್ಲಿ ಟೆಂಟ್ ಹಾಕಿಕೊಳ್ಳಲು ಹೋದರೆ, ಜಮೀನಿನ ಮಾಲಕರು ಅವಕಾಶ ನೀಡುತ್ತಿಲ್ಲ ಎಂದು ಧರಣಿ ನಿರತ ಮಹಿಳೆ ಸಣ್ಣ ಲಕ್ಷ್ಮಕ್ಕ ಬೇಸರ ವ್ಯಕ್ತಪಡಿಸಿದರು.
‘ವಾರ್ತಾಭಾರತಿ’ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ನಮಗೆ ನಮ್ಮದೇ ಆದ ನೆಲ ಇಲ್ಲ. ಇದ್ದಿದ್ದರೆ ನಾವು ಬೇರೆ ಕಡೆ ಹೋಗುತ್ತಿರಲಿಲ್ಲ. ನಾವು ಅಲೆಮಾರಿ ಸಮುದಾಯದವರು ಒಂದು ಕಡೆಯಿಂದ ಮತ್ತೊಂದು ಕಡೆ ಅಲೆಯುವಂತಾಗಿದೆ. ನಾನು 7 ವರ್ಷದವಳಾಗಿದ್ದಾಗ ಈ ಊರಿಗೆ ಬಂದದ್ದು, ಈಗ ನನಗೆ 45 ವರ್ಷ ಎಂದರು.
ನಮ್ಮ ಹಿರಿಯರು ಆಗಿನಿಂದಲೂ ಸರಕಾರಕ್ಕೆ ನಿವೇಶನಕ್ಕಾಗಿ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಬೆಂಗಳೂರು, ತುಮಕೂರಿನಲ್ಲಿರುವ ಸರಕಾರಿ ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ. ಈಗ ನಮ್ಮ ತಲೆ ಮೇಲೆ ಸೂರು ಇಲ್ಲದಂತಾಗಿದೆ. ಬಾಣಂತಿಯರು, ಅಸ್ವಸ್ಥರು, ವಯೋವೃದ್ಧರು ಇಂತಹ ಪರಿಸ್ಥಿತಿಯಲ್ಲಿ ಹೇಗೆ ಇರಬೇಕು. ಅನಿವಾರ್ಯವಾಗಿ ನಾವು ಪ್ರತಿಭಟನೆಯ ಹಾದಿಯನ್ನು ಹಿಡಿದಿದ್ದೇವೆ ಎಂದು ಸಣ್ಣ ಲಕ್ಷ್ಮಕ್ಕ ತಿಳಿಸಿದರು.
ಅಧಿಕಾರಿಗಳು ನಾಲ್ಕೈದು ದಿನಗಳ ಕಾಲಾವಕಾಶ ಕೋರಿದ್ದಾರೆ. ನಿವೇಶನ ನೀಡುವುದಾಗಿ ಬಾಯಿ ಮಾತಲ್ಲಿ ಹೇಳಿದರೆ ಸಾಲದು, ಸ್ಥಳ ಎಲ್ಲಿದೆ ಎಂದು ಅಧಿಕಾರಿಗಳು ತೋರಿಸಿದರೆ ನಾವು ನಮ್ಮ ಜೀವನ ಕಟ್ಟಿಕೊಳ್ಳುತ್ತೇವೆ. ಇಲ್ಲದಿದ್ದರೆ, ಅನಿರ್ದಿಷ್ಟಾವಧಿ ಧರಣಿಯನ್ನು ಮುಂದುವರೆಸಬೇಕಾಗುತ್ತದೆ ಎಂದು ಅವರು ಹೇಳಿದರು.