ವೈದಿಕ, ಪುರೋಹಿತಶಾಹಿ ಎಲ್ಲ ಪ್ರಭುತ್ವದೊಂದಿಗೆ ಕೈಜೋಡಿಸಿದೆ: ಡಾ.ಬಂಜಗೆರೆ ಜಯಪ್ರಕಾಶ್
ಬೆಂಗಳೂರು, ಅ. 8: ದೇಶದಲ್ಲಿ ವೈದಿಕ ಮತ್ತು ಪುರೋಹಿತಶಾಹಿಯು ಎಲ್ಲಾ ಪ್ರಭುತ್ವದೊಂದಿಗೆ ಸಮೀಕರಿಸಿಕೊಂಡಿದೆ. ಆ ಮೂಲಕ ತಾತ್ವಿಕ ಚಿಂತಕರನ್ನು ಕೊಲ್ಲಲು ಅದು ಪ್ರೇರಣೆ ನೀಡಿದೆ ಎಂದು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಅಭಿಪ್ರಾಯಪಟ್ಟರು.
ಶನಿವಾರ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್.ಎನ್.ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರೀಟಾ ರೀನಿ ಅನಿವಾದಿಸಿದ ‘ಸಿಖ್ ಕ್ರಾಂತಿ’ ಹಾಗೂ ಡಾ. ಕ್ಷ್ಮೀಪತಿ ಸಿ.ಜಿ. ಅವರ ‘ಕ್ಯಾಸ್ಟ್ ಕೆಮಿಸ್ಟ್ರಿ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪುರೋಹಿತಶಾಹಿಯು ಮೊಘಲರ ಜೊತೆ ಕೈಜೋಡಿಸಿ, ಸಿಖ್ ಹೋರಾಟವನ್ನು ದಮನಿಸಲು ಪಿತೂರಿ ನಡೆಸಿತು.
ಸಿಖ್ ಹೋರಾಟವನ್ನು ಹತ್ತಿಕ್ಕಲು ಹತ್ಯೆಗಳು ನಡೆದವು. ಹಾಗೆಯೇ ಚಾತುರ್ವರ್ಣ ಪದ್ಧತಿಯೇ ಇಲ್ಲದ ದಕ್ಷಿಣ ಭಾರತದಲ್ಲಿ, ಉತ್ತರ ಭಾರತದ ಬ್ರಾಹ್ಮಣರು ಇಲ್ಲಿನ ಶೂದ್ರ ರಾಜಮನೆತನಗಳೊಂದಿಗೆ ಕೈಜೋಡಿಸಿ, ಸಂಸ್ಕೃತ ಚಿಂತಕರ ಮುಖಾಂತರವಾಗಿ ಜಾತಿಯ ಸಮಾಜಕ್ಕೆ ಪ್ರಚೋದಿಸಿದರು. ಆ ಮೂಲಕ ಜಾತಿ ಸಮಾಜವನ್ನು ವಿರೋಧಿಸಿದವರನ್ನು ದಮನಿಸಿದರು’ ಎಂದು ಅವರು ಹೇಳಿದರು.
‘ಸಿಖ್ ಕ್ರಾಂತಿಗಿಂತ ನೂರ ವರ್ಷಗಳ ಹಿಂದೆ ವಚನಕ್ರಾಂತಿ ನಡೆದಿದೆ. ವಚನಕಾರರ ಹೋರಾಟದ ಬಗ್ಗೆ ಬೇಕಾದಷ್ಟು ಕಥನಗಳು ನಡೆದಿವೆ. ಸಾಮಾಜಿಕ ಹೋರಾಟಗಳ ಕುರಿತು ನಡೆದ ಈ ಹೋರಾಟಗಳಿಗೆ ಕತೆ ಕಟ್ಟುತ್ತಾರೆ. ಆದರೆ ವಸ್ತುನಿಷ್ಠ ಚಾರಿತಿಕ ಆಧಾರವನ್ನು ಮರೆ ಮಾಚುತ್ತಾರೆ. ಆದರೆ ಸಿಖ್ ಕ್ರಾಂತಿ ಕೃತಿಯು ಈ ವಸ್ತುನಿಷ್ಠ ಚಾರಿತ್ರಿಕ ಆಧಾರವನ್ನು ಹೊಂದಿದೆ ಎಂದು ಅವರು ತಿಳಿಸಿದರು. ಪತ್ರಕರ್ತ ಡಿ.ಉಮಾಪತಿ, ಎಸ್.ಎನ್.ನಾಗರಾಜರೆಡ್ಡಿ, ಡಾ.ರವಿಕುಮಾರ್ ಬಾಗಿ ಉಪಸ್ಥಿತರಿದ್ದರು.