×
Ad

ರಾಷ್ಟ್ರಪತಿ ಮುರ್ಮು ಅವಹೇಳನ ಆರೋಪ: ಹೇಳಿಕೆ ಸಮರ್ಥಿಸಿಕೊಂಡ ಪತ್ರಕರ್ತ ವಿಶ್ವೇಶ್ವರ ಭಟ್

Update: 2022-10-09 16:15 IST
ವಿಶ್ವೇಶ್ವರ್ ಭಟ್(Twitter) / ದ್ರೌಪದಿ ಮುರ್ಮು(PTI)

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ಅವರು ತಮ್ಮ ಅಂಕಣದಲ್ಲಿ ಅವಮಾನಿಸಿದ್ದಾರೆ ಎಂದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೊಳಗಾಗಿದ್ದರು. ತಮ್ಮ ಅಂಕಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಣ್ಣವನ್ನು ಅವಮಾನಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿಶ್ವೇಶ್ವರ್ ಭಟ್ ಅವರ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಆದರೆ ರವಿವಾರ ತಮ್ಮ ಮಾತನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 

ತಮ್ಮ ವಿರುದ್ಧದ ಟೀಕೆಗೆ ಪ್ರತಿಕ್ರಿಯಿಸಿದ ವಿಶ್ವೇಶ್ವರ್ ಭಟ್ ಅವರು, " ಜೋರ್ಡಾನಿನ ಬಿಸಿಲಿಗೆ ನಾನೂ ಅವರಂತೆ ಆಗಿದ್ದೆ ಎಂದು ಹೇಳಿದ್ದೇನೆ ಅದರಲ್ಲಿ ಅವಮಾನವೇನು ಬಂತು" ಎಂದು ಪ್ರಶ್ನಿಸಿದ್ದಾರೆ.

ಇಂದು ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ 'Ask the editor' ಕಾಲಂನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವಮಾನಿಸಿದ್ದಾರೆನ್ನಲಾದ ಬಗ್ಗೆ ಕೀರ್ತಿಕುಮಾರ್ ಎಂಬವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಕೀರ್ತಿಕುಮಾರರೇ 'ಥೇಟು ಮುರ್ಮು ಅವತಾರ' ಎಂದು ಬರೆದಿದ್ದರಲ್ಲಿ ನೀವು ಅದ್ಯಾವ ಅವಮಾನವನ್ನು ಕಂಡಿರೋ ನಾ ಕಾಣೆ. ಜೋರ್ಡಾನಿನ ಬಿಸಿಲ ಹೊಡೆತಕ್ಕೆ ನಾನೂ ಅವರಂತೆ ಆಗಿದ್ದೆ ಎಂದು ಹೇಳಿದ್ದೇನೆ. ಅದು ಸತ್ಯ. ಅದರಲ್ಲಿ ಅವಮಾನವೇನು ಬಂತು. ನನ್ನ ಮುಖ ಅವಮಾಸ್ಯೆ ಚಂದಿರನಂತೆ ಆಗಿತ್ತು ಅಂದ್ರೆ ಚಂದ್ರನನ್ನು ಅವಮಾನಿಸಿದಂತೆ ಅಂದಂಗಾಯ್ತು ನಿಮ್ಮ ವಾದ. ನನ್ನ ಮನಸ್ಸಿನಲ್ಲಿ ಇಲ್ಲದ ಭಾವನೆಯನ್ನು ನೀವೇಕೆ ತುಂಬುವ ಪ್ರಯತ್ನ ಮಾಡುತ್ತಿರಿ? ಇನ್ನು ನಿಮ್ಮ ಹಾಗೆ ತಿರಸಟ್ಟು ಯೋಚನೆ ಮಾಡಿದರೂ, ನಾನು ಅವರಂತೆ ಕಪ್ಪಾಗಿದ್ದೆ ಎಂದು ನನ್ನನ್ನೇ ಗೇಲಿಮಾಡಿಕೊಂಡಿದ್ದೇನೆ. ಅವರನ್ನು ಗೇಲಿ ಮಾಡಿ ಅಪಮಾನಿಸುವ ಪ್ರಶ್ನೆ ಎಲ್ಲಿಂದ ಬಂತು?. ಇರಲಿ, ಆದರೂ ನಿಮ್ಮನ್ನು ಕೇಳುತ್ತೇನೆ. ರಾಷ್ಟ್ರಭಕ್ತ ಸಂಘಟನೆಯನ್ನು 'ಜಾಣ-ಜಾಣೆಯರ' ಪತ್ರಿಕೆಯ ಸಂಪಾದಕರೊಬ್ಬರು 'ಚಡ್ಡಿ' ಎಂದು ಎರಡು ದಶಕಗಳ ಕಾಲ ಬರೆದರು. ಮೈಸೂರು ಕಡೆ ರೈತರು ಚಡ್ಡಿ ಹಾಕಿ ಹೊಲಕ್ಕೆ ಹೋಗುತ್ತಾರೆ. ಆಗೇಕೆ ನಿಮಗೆ ಆ ಸಂಪಾದಕರು ರೈತರನ್ನು ಅವಮಾನಿಸಿದರು ಎಂದು ನಿಮಗೆ ಅನಿಸಲಿಲ್ಲ. ಈ ಬಗ್ಗೆ ಒಬ್ಬೇ ಒಬ್ಬ ಬುದ್ಧಿಜೀವಿ ದನಿಯೆತ್ತಿದರಾ? ಇಲ್ಲವಲ್ಲ". ಸಾಮಾಜಿಕ ಜಾಲತಾಣದಲ್ಲಿ ಟಿಆರ್ಎಸ್ ಮುಖಂಡ ಕೆ.ಸಿ. ಚಂದ್ರಶೇಖರ್ ಅವರನ್ನು 'ಕಪ್ಪು ತಿಕದ ಇಣಚಿ ಮೂಗಿನವ' ಎಂದು ಹೇಳಿದಾಗ, ಎಲ್ಲರೂ ನಕ್ಕರು. ಆಗೇಕೆ ನೀವು ಸುಮ್ಮನಿದ್ದಿರಿ? ಅವೆಲ್ಲಾ ಇರಲಿ. ನಮ್ಮ ಮಾಜಿ ಮೂಕ್ಯಂತ್ರಿ ಕುಮಾರಸ್ವಾಮಿ ಅವರನ್ನು ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅವರ ಮುಖ ಬಣ್ಣವನ್ನು ಗುರಿಯಾಗಿಟ್ಟಿಕೊಂಡು 'ಕರಿ ಇಡ್ಲಿ' ಎಂದು ಕರೆಯುತ್ತಿರುವುದು ಬರದಿರಲು ಸಾದ್ಯವಿಲ್ಲ. ಆಗ ನೀವು ಯಾಕೆ ಸುಮ್ಮನಿದ್ದಿರಿ? ಹಾಗೆ ಬರೆದವರನ್ನು ನೀವು ಪ್ರಶ್ನೆ ಮಾಡಿದ್ದೀರಾ? ಬೇರೆಯವರ ಮೇಲೆ ಉಚ್ಚೆ ಹಾರಿಸುವ ಮೊದಲು ನಮ್ಮ ಕಾಲ ಮೇಲೆ ಬೀಳದಂತೆ ನೋಡಿಕೊಳ್ಳಬೇಕಲ್ಲವೇ?!..ಹಾಂ!" ಎಂದು ಸಮರ್ಥಿಸಿಕೊಂಡಿದ್ದಾರೆ.

ಅ. 06ರಂದು ಪ್ರಕಟವಾದ 'ನೂರೆಂಟು ವಿಶ್ವ' ಎಂಬ ತಮ್ಮ ಅಂಕಣದಲ್ಲಿ 'ನದಿಯ ಹೆಸರಿಟ್ಟುಕೊಂಡು ನೀರಿಗಾಗಿ ನರಳುವ ಜೋರ್ಡಾನ್!' ಎಂಬ ಬರಹದಲ್ಲಿ ಜೋರ್ಡಾನ್ ನ ಬಿಸಿಲಿನ ಬಗ್ಗೆ ವಿವರಿಸುವಾಗ, “ಅಪ್ಪಟ ಬೀನ್ಕಿ ಕೆಂಡ! ಅರ್ಧಗಂಟೆ ಆ ಮರುಭೂಮಿಯಲ್ಲಿ ನಿಂತರೆ ಇಡೀ ಶರೀರವೆಲ್ಲ ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ! ಕಣ್ಮುಚ್ಚಿದರೂ ಜೋಗದ ಜಲಪಾತದಂತೆ ಸುರಿಯುವ ನಿಗಿನಿಗಿ ಬಿಸಿಲ ಧಾರೆ” ಎಂದು ಬರೆದಿದ್ದು, ಇದು ರಾಷ್ಟ್ರಪತಿ ಅವರನ್ನು ಅವಹೇಳನ ಮಾಡಿದ್ದಾಗಿ ಆರೋಪಿಸಲಾಗಿತ್ತು. ಈ ಬಗ್ಗೆ ಸಾಮಾಜಿಕ ತಾಲತಾಣದಲ್ಲಿ ತೀವೃ ಆಕ್ಷೇಪ ವ್ಯಕ್ತವಾಗಿತ್ತು.

"ರಾಷ್ಟ್ರಪತಿಯವರ ಮೈಬಣ್ಣವನ್ನೇ ಕೀಳಾಗಿ ಅವಮಾನಿಸಿದ ವಿಶ್ವೇಶ್ವರ ಭಟ್ಟನಿಗೆ ಧಿಕ್ಕಾರವಿರಲಿ" ಎಂದು ಗಿರಿಧರ್ ಕಾರ್ಕಳ ಎಂಬವರು ಫೋಸ್ಟ್ ಮಾಡಿದ್ದರೆ, " 'ಮುರ್ಮು' ಅವತಾರ ಅಂದರೆ ಏನು..? ಈ ಪದ ಸನ್ಮಾನ್ಯ ರಾಷ್ಟ್ರಪತಿ ಅವರ ಮೈಬಣ್ಣದ ಕುರಿತು ಬರೆದುದೇ ಆದರೆ ನೀವು ರಾಷ್ಟ್ರೀಯ ಲಾಂಛನವನ್ನು ನಿಂದಿಸಿದಷ್ಟೇ ಶಿಕ್ಷೆಗೆ ಅರ್ಹರಿದ್ದೀರಿ. ಅದು ಅಕ್ಷಮ್ಯ ಅಪರಾಧ"  ಎಂದು ಮಂಜುನಾಥ್ ಎಂಬವರು ಟ್ವೀಟ್ ಮಾಡಿದ್ದಾರೆ. ಭಟ್ ಅವರ ಹೇಳಿಕೆ ಖಂಡಿಸಿ ಕ್ಷಮೆ ಕೇಳಬೇಕೆಂದು ಹಲವರು ಟ್ವೀಟ್ ಮಾಡಿದ್ದಾರೆ

Full View
Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News