×
Ad

ತಳಸಮುದಾಯಗಳಿಗೆ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚಿನ ಒತ್ತು: ಮುಖ್ಯಮಂತ್ರಿ ಬೊಮ್ಮಾಯಿ

Update: 2022-10-09 18:43 IST

ಬೆಂಗಳೂರು, ಅ. 9: ‘ಶಿಕ್ಷಣ ಮತ್ತು ಉದ್ಯೋಗ 21ನೆ ಶತಮಾನದ ಅವಶ್ಯಕತೆಗಳು. ಸರಕಾರ ತಳ ಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ವಿಶೇಷವಾದ ಒತ್ತು ನೀಡಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ರವಿವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ  ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ‘ವಾಲ್ಮೀಕಿ ಪ್ರಶಸ್ತಿ' ಪ್ರದಾನ ಮಾಡಿ ಮಾತನಾಡಿದ ಅವರು, ‘ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಗೆ ಸಂಕಲ್ಪ ಮಾಡಿರುವ ಪ್ರಧಾನಿ ಆಶಯದಂತೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಎಂಬ ಆಶಯಸಾಕಾರಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ವಿಧಾನಸೌಧದಿಂದ ಹೊರಡುವ ಪ್ರತಿಯೊಂದು ಆದೇಶವೂ ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳಿಂದ ಕೂಡಿದ್ದು ತಳಸಮುದಾಯ ಏಳಿಗೆಗೆ ಪೂರಕವಾಗಿರಲಿವೆ' ಎಂದು ಹೇಳಿದರು. 

‘ಸಮಾಜದಲ್ಲಿ ಎಲ್ಲ ವರ್ಗದವರೂ ಅಣ್ಣ-ತಮ್ಮಂದಿರಂತೆ ಬಾಳುವ ಮೂಲಕ ವಾಲ್ಮೀಕಿಯವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಎಲ್ಲರಿಗೂ ಸಮಾನ ಅವಕಾಶ ನೀಡುವುದೇ ರಾಮರಾಜ್ಯ. ವಾಲ್ಮೀಕಿ ಸೇರಿದಂತೆ ಬುದ್ಧ, ಬಸವ ಹಾಗೂ ಸಂವಿಧಾನದಲ್ಲಿಯೂ ಸಮಾನತೆ ಪ್ರತಿಪಾದಿಸಲಾಗಿದೆ. ಹೆಜ್ಜೆ ಮುಂದಿಟ್ಟಾಗ ಮಾತ್ರ ಯಶಸ್ಸು ದೊರೆಯುತ್ತದೆ. ಇಚ್ಛಾಶಕ್ತಿಯಿಂದ ಮುನ್ನಡೆದಾಗ ಯಶಸ್ಸು ನಮ್ಮದಾಗುತ್ತದೆ. ಎಸ್ಸಿ-ಎಸ್ಟಿಗಳಿಗೆ ನ್ಯಾಯ ದೊರೆಯುವಂತಾಗಬೇಕು. ವ್ಯವಸ್ಥೆಯಲ್ಲಿ ಸಮಾನದ ಅವಕಾಶ ನೀಡಬೇಕು' ಎಂದು ಅವರು ತಿಳಿಸಿದರು.

ಕನಸನ್ನು ನನಸು ಮಾಡುವ ಕೆಲಸ: ‘ಮಠ-ಪೀಠಗಳು ತುಳಿತಕ್ಕೊಳಗಾದ ಜನಾಂಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿವೆ. ಡಾ.ಅಂಬೇಡ್ಕರ್ ಹೆಸರಿನಲ್ಲಿ 101 ಹಾಸ್ಟೆಲ್‍ಗಳನ್ನು, 5ಮೆಗಾ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗುತ್ತಿದೆ. 28ಸಾವಿರ ಕೋಟಿ ರೂ.ಗಳನ್ನು ಎಸ್ಸಿ-ಎಸ್ಟಿಗಳಿಗೆ ನೀಡಲಾಗಿದ್ದು, 6ಸಾವಿರ ಕೋಟಿ ರೂ.ಎಸ್ಸಿ-ಎಸ್ಟಿ ಇಲಾಖೆಗೆ ನೀಡಲಾಗಿದೆ. ಪರಿಶಿಷ್ಟರು ಭೂಮಿ ಪಡೆಯಲು 20ಲಕ್ಷ ರೂ., ಮನೆ ನಿರ್ಮಾಣಕ್ಕೆ 2ಲಕ್ಷ ರೂ., ಎಸ್ಸಿ-ಎಸ್ಟಿಗಳಿಗೆ 75ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪ್ರತಿ ಕ್ಷೇತ್ರದಲ್ಲಿ ನೂರು ಯುವಕರಿಗೆ 10ಲಕ್ಷ ರೂ.ಸ್ವಯಂ ಉದ್ಯೋಗಕ್ಕಾಗಿ ಒದಗಿಸಲಾಗುತ್ತಿದ್ದು, ಜಗಜೀವನರಾಮ್ ಹೆಸರಿನಲ್ಲಿ ಅನುದಾನ ನೀಡಲಾಗುತ್ತಿದೆ. ಆ ಮೂಲಕ ಅಂಬೇಡ್ಕರ್ ಕನಸನ್ನು ನನಸು ಮಾಡುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮ ಪರ ಕೆಲಸ ಮಾಡಲು ನಿಮ್ಮ ಆಶೀರ್ವಾದ ಬೇಕು' ಎಂದು ಅವರು ಮನವಿ ಮಾಡಿದರು.

ಸಮಾನತೆಗೆ ಅವಕಾಶ: ‘ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲು ನಿಮ್ಮ ಸಮುದಾಯದ ಪ್ರೀತಿ, ವಿಶ್ವಾಸ, ನನಗೆ ಪ್ರೇರಣೆ. ಅಂತೆಯೇ ಬುದ್ದ, ಬಸವ, ಅಂಬೇಡ್ಕರ್, ವಾಲ್ಮೀಕಿ ನನಗೆ ಸ್ಪೂರ್ತಿಯಾಗಿದ್ದಾರೆ. ಕಠಿಣ ಪರಿಶ್ರಮ ನಡೆಸುವವರ ಬದುಕನ್ನು ಹತ್ತಿರದಿಂದ ಕಂಡಿದ್ದೇನೆ.ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಬೇಕು. ನ್ಯಾ.ನಾಗಮೋಹನ್ ದಾಸ್ ಹಾಗೂ ನ್ಯಾ.ಅಡಿಯವರಿಗೆ ಅಭಿನಂದನೆ ಸಲ್ಲಿಸಬೇಕು. ಸಮಷ್ಟಿಯ ಒಳಿತಿಗೆ ಈ ನಿರ್ಣಯ ಕೈಗೊಳ್ಳಲಾಗಿದೆ. ಸರ್ವಪಕ್ಷದ  ನಾಯಕರೂ ಈ ನಿರ್ಣಯಕ್ಕೆ ಒಕ್ಕೊರಲಿನ ಬೆಂಬಲ ಸೂಚಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪನವರ ಮಾರ್ಗದರ್ಶನ ಪಡೆಯಲಾಗಿದೆ' ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿ, ಭೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿ, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಶಾಸಕ ರಾಜುಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ವಾಲ್ಮೀಕಿ ಶ್ರೇಷ್ಠ ಮಾನವತಾವಾದಿ. ವಿಶ್ವಕ್ಕೆ ಪರಿವರ್ತನೆಯ ಸಂದೇಶ ಸಾರಿದರು. ಅವರು ರಚಿಸಿದ ರಾಮಾಯಣ ಮನಮುಟ್ಟುವಂತೆ ಬರೆದಿದ್ದಾರೆ. ವಿಶ್ವದ ಶ್ರೇಷ್ಠ 10 ಗ್ರಂಥಗಳಲ್ಲಿಯೇ ಅತ್ಯಂತ ಶ್ರೇಷ್ಠ ಗ್ರಂಥ. ಶ್ರೀರಾಮ ಎಂದರೆ ನ್ಯಾಯ, ನೀತಿ, ಧರ್ಮ, ಎಲ್ಲ ಗುಣಗಳ ಸಂಕೇತ.ರಾಮನಿಗೆ ಸರಿಸಾಟಿ ಯಾರೂ ಇಲ್ಲ. ತಂದೆ-ಮಗನ, ಅಣ್ಣ-ತಮ್ಮಂದಿರ, ಪತಿ-ಪತ್ನಿ ಹಾಗೂ ಗುರು-ಶಿಷ್ಯರ ಸಂಬಂಧವನ್ನು ರಾಮ-ಆಂಜನೇಯನರ ಸಂಬಂಧದಿಂದ ತಿಳಿಯಬೇಕೆಂದರೆ ರಾಮಾಯಣ ಓದಬೇಕು'
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

………
ಬಾಕ್ಸ್..
‘ವಾಲ್ಮೀಕಿ ಸಮುದಾಯದವರು ಯಾರಿಗೂ ಕಡಿಮೆ ಇಲ್ಲ, ವಿದ್ಯೆ, ಬುದ್ದಿ, ಶಕ್ತಿ,ಸಾಹಸದಲ್ಲಿ ಯಾವುದರಲ್ಲಿಯೂ ಕಡಿಮೆ ಇಲ್ಲ. ಬೇಡರ ಕಣ್ಣಪ್ಪನಂತ ಭಕ್ತ ಯಾರಿದ್ದಾರೆ. ದೇವರಿಗೆ ತನ್ನ ಕಣ್ಣು ಅರ್ಪಿಸಿ ದೇವರನ್ನೇ ತನ್ನ ಕಡೆಗೆ ಸೆಳೆದುಕೊಂಡ ವಾಲ್ಮೀಕಿ ಸಮುದಾಯದವರು ಸ್ವಾಭಿಮಾನಿಗಳು. ನೀವು ಯಾರಿಗೂ ಗುಲಾಮರಾಗುವುದು ಬೇಡ. ರಾಜ್ಯವಾಳಿದ ಮದಕರಿ ನಾಯಕನ ಶೌರ್ಯ,ಒನಕೆ ಓಬವ್ವ, ಸುರಪುರದ ರಾಜಾ ವೆಂಕಟಪ್ಪ ನಾಯಕರು ಅವರ ಸಾಧನೆಗಳು ಅಪಾರ. ವಾಲ್ಮೀಕಿ ಜನಾಂಗದ  ಪ್ರೀತಿ, ವಿಶ್ವಾಸ, ನಂಬಿಕೆ,  ನಿಮ್ಮ ಪ್ರೀತಿಗೆ ನಾನು ಸೋತಿದ್ದೇನೆ. ಇದು ನಿಮ್ಮ ಹೊರಾಟದ ಗೆಲುವು'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News