'5, 8ನೆ ತರಗತಿಗೆ ಪಬ್ಲಿಕ್ ಪರೀಕ್ಷೆ-ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿ': ಸಿಎಂಗೆ ಪತ್ರ ಬರೆದ ವಿ.ಪಿ. ನಿರಂಜನಾರಾಧ್ಯ
ಬೆಂಗಳೂರು: ‘ಶಿಕ್ಷಣ ಇಲಾಖೆಯು ಐದು ಮತ್ತು ಎಂಟನೇ ತರಗತಿಗೆ ಪಬ್ಲಿಕ್ ಪರೀಕ್ಷೆ, ಮೌಲ್ಯಾಂಕನ ಮಾಡಲು ನಿರ್ಧರಿಸಿದ್ದು, ಈ ನಿರ್ಧಾರ ಶಿಕ್ಷಕರು, ಮಕ್ಕಳು ಹಾಗೂ ಪೋಷಕರಿಗೆ ಆತಂಕವನ್ನು ಉಂಟು ಮಾಡಿದೆ ಎಂದು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾಪೋಷಕ ಡಾ. ವಿ.ಪಿ ನಿರಂಜನಾರಾಧ್ಯ ಅವರು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ.
‘ಕಳೆದ ಎರಡು ಮೂರು ವರ್ಷಗಳಿಂದ ಸರಕಾರ ಮತ್ತು ಶಿಕ್ಷಣ ಇಲಾಖೆಯ ಸಚಿವರು ಶಿಕ್ಷಣದ ವಿಚಾರದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದ್ದಾರೆ. ಸಮವಸ್ತ್ರ ಹಾಗೂ ಶೂ-ಸಾಕ್ಸ್ ವಿತರಣೆಯ ವಿಳಂಬ, ಪಠ್ಯಪುಸ್ತಕ ಪರಿಷ್ಕರಣೆಯ ವಿವಾದ, ಶಿಕ್ಷಕರ ವರ್ಗಾವಣೆಯ ಗೊಂದಲ, ಮಕ್ಕಳ ಪ್ರವೇಶಕ್ಕೆ ವಯೋಮಿತಿ ನಿಗದಿ, ಶಿಕ್ಷಕರ ನೇಮಕಾತಿಯ ವಿಳಂಬ, ಇತ್ತೀಚಿಗೆ ಬೆಳಕಿಗೆ ಬಂದ ಭ್ರಷ್ಟಾಚಾರ, ಮುಂತಾದ ವೈಫಲ್ಯಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಘನತೆ, ಗೌರವ ಮತ್ತು ಜನರಿಗಿದ್ದ ನಂಬಿಕೆಯನ್ನು ಹುಸಿಗೊಳಿಸಿವೆ’ ಎಂದು ಅವರು ಆರೋಪಿಸಿದ್ದಾರೆ.
‘ಮಕ್ಕಳ ಕಲಿಕಾ ಮೌಲ್ಯಮಾಪನಕ್ಕೆ ಈಗಾಗಲೇ ವೈಜ್ಞಾನಿಕ, ಹಾಗೂ ಮಕ್ಕಳ ಸ್ನೇಹಿ ವ್ಯವಸ್ಥೆಯಿರುವಾಗ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು ಬಿಟ್ಟು, ಸಚಿವರು ಇಡೀ ಶಿಕ್ಷಣ ವ್ಯವಸ್ಥೆಯನ್ನು ಅವೈಜ್ಞಾನಿಕ ಸನಾತನ ಪರೀಕ್ಷಾ ಸಂಪ್ರದಾಯಕ್ಕೆ ನೂಕುತ್ತಿರುವುದು ನಿಜಕ್ಕೂ ಹಿನ್ನೆಡೆಯಾಗಿದೆ. ಹಕ್ಕು ಆಧಾರಿತ ಮಕ್ಕಳ ಸ್ನೇಹಿ ಶಿಕ್ಷಣ ಕ್ರಮದಿಂದ ಪರೀಕ್ಷಾ ಕೇಂದ್ರಿತ ಬ್ಯಾಂಕಿಂಗ್ ವಿಧಾನದ ಮಕ್ಕಳ ವಿರೋಧಿ ಕಲಿಕಾ ವ್ಯವಸ್ಥೆಗೆ ಮರಳುತ್ತಿರುವುದು ನಿಜಕ್ಕೂ ಶೋಚನೀಯ ಮತ್ತು ಅನಪೇಕ್ಷಣೀಯ’ ಎಂದು ಅವರು ತಿಳಿಸಿದ್ದಾರೆ.
‘ಶಿಕ್ಷಣ ಸಚಿವರಿಗೆ ಈಗ ಜಾರಿಯಲ್ಲಿರುವ ಹಕ್ಕು ಆಧಾರಿತ ಮಕ್ಕಳ ಸ್ನೇಹಿ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಮತ್ತು ವಿದ್ಯಾರ್ಥಿಗಳಿಗೆ ಮಾರಕವಾಗುವ ಉದ್ದೇಶಿತ 5 ಮತ್ತು 8ನೆ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ಕೈಬಿಡಲು ಸೂಚಿಸಬೇಕು’ ಎಂದು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಅವೈಜ್ಞಾನಿಕ ನಿರ್ಧಾರದಿಂದ ಶಿಕ್ಷಣ ಹಕ್ಕು ಕಾಯಿದೆಯು ನಿರಂತರ ಉಲ್ಲಂಘನೆಯಾಗುತ್ತಿದ್ದು, ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆಯಾಗಿದೆ. ಈ ಎಲ್ಲ ಗೊಂದಲಗಳಿಗೆ ಶಿಕ್ಷಣ ಸಚಿವರ ಅಪ್ರಬುದ್ಧತೆ, ಸರ್ವಾಧಿಕಾರಿ ಧೋರಣೆ ಹಾಗೂ ಮೂಲವಾರಸುದಾರರನ್ನು ಒಳಮಾಡಿಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಿಸುವ ಅಪ್ರಜಾಸತ್ತಾತ್ಮಕ ಕಾರ್ಯವಿಧಾನವೇ ಕಾರಣವಾಗಿದೆ.
-ಡಾ.ವಿ.ಪಿ.ನಿರಂಜನಾರಾಧ್ಯ, ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾಪೋಷಕ