×
Ad

ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ ಸಿಎಂಗೆ ನಾವೆಲ್ಲರೂ ಗುಲಾಮರಾಗಿರಬೇಕು ಎಂದ ಶಾಸಕ ರಾಜುಗೌಡ

Update: 2022-10-09 22:31 IST
ಶಾಸಕ ರಾಜುಗೌಡ

ಬೆಂಗಳೂರು, ಅ. 9: ‘ಸ್ವಾತಂತ್ರ್ಯ ಭಾರತದ ಎಪ್ಪತ್ತೈದು ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ(ಎಸ್ಸಿ-ಎಸ್ಟಿ) ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾವೆಲ್ಲರೂ ನಮ್ಮ ಜೀವ ಇರುವವರೆಗೂ ಗುಲಾಮರಾಗಿರಬೇಕು' ಎಂದು ಬಿಜೆಪಿ ಶಾಸಕ ರಾಜೂಗೌಡ ಹೇಳಿದ್ದಾರೆ.

ರವಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಾಗೂ ವಾಲ್ಮೀಕಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಿಎಂ ಬೊಮ್ಮಾಯಿ ಅವರು ಜೋಡಿ ಗುಂಡಿಗೆ (ಎರಡು ಹೃದಯ) ಇರುವ ಸಭ್ಯ ವ್ಯಕ್ತಿ. ಅವರ ಜೇನುಗೂಡಿಗೆ ಕೈಹಾಕಿ ಮೀಸಲಾತಿ ಹೆಚ್ಚಿಸುವ ಮೂಲಕ ಪರಿಶಿಷ್ಟ ಸಮುದಾಯಕ್ಕೆ ಜೇನು ತಿನ್ನುಸುವಂತಹ ಕೆಲಸ ಮಾಡಿದ್ದಾರೆ" ಎಂದರು.

ಎಸ್ಸಿ-ಎಸ್ಟಿ ವರ್ಗದ ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಈ ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನುಕೂಲವಾಗಲಿದೆ. ಹೀಗಾಗಿ ನಾವೆಲ್ಲರೂ ಅವರಿಗೆ ಸೈನಿಕರಾಗಿ ಸದಾ ಜೊತೆಗಿರಬೇಕು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸೇರಿದಂತೆ ಎಲ್ಲ ಮಠಾಧೀಶರ ಶಾಂತ ರೀತಿಯ ಹೋರಾಟ ಫಲವಾಗಿ ನಮಗೆ ಮೀಸಲಾತಿ ಹೆಚ್ಚಳವಾಗಿದೆ. ಹೀಗಾಗಿ ಎಲ್ಲರಿಗೂ ದೀರ್ಘದಂಡ ನಮಸ್ಕಾರ ಮಾಡುತ್ತೇನೆ ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಯಾರೂ ಯರಿಗೂ ಗುಲಾಮರಾಗಬಾರದು, ನಮಗೆ ಜೀವ ಕೊಟ್ಟಿರುವ ದೇವರಿಗೆ ಮಾತ್ರ ಗುಲಾಮನಾಗಬೇಕು. ನರಜೀವಿಗಳಿಗೆ ಗುಲಾಮನಾಗಬಾರದು ಇನ್ನೊಮ್ಮೆ ಈ ಮಾತು ನಿನ್ನ ಬಾಯಿಂದ ಬರಬಾರದು" ಎಂದು ರಾಜುಗೌಡ ಅವರಿಗೆ ಸಲಹೆ ಮಾಡಿದರು.

ಇದನ್ನೂ ಓದಿ: 5ಜಿ ಹೆಸರಿನಲ್ಲಿ ವಂಚನೆ ಸಾಧ್ಯತೆ: ಎಚ್ಚರ ವಹಿಸಿ ಎಂದ ಪೊಲೀಸರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News