ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ಅ.31ರ ವರೆಗೆ ವಿಸ್ತರಿಸುವಂತೆ ಶಿಕ್ಷಕರ ಸಂಘ ಒತ್ತಾಯ

Update: 2022-10-09 18:22 GMT
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ 

ಬೆಂಗಳೂರು: ಶಾಲಾಮಕ್ಕಳಿಗೆ ಮಧ್ಯಂತರ ದಸರಾ ರಜೆಯನ್ನು ಅ.31ರವರೆಗೆ ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರವನ್ನು ಬರೆದಿದೆ. 

‘ರಾಜ್ಯ ಸರಕಾರವು ಈ ಬಾರಿ ಮಧ್ಯಂತರ ರಜೆಯನ್ನು ಅ.3 ರಿಂದ ಅ.17ರ ವರೆಗೆ ನಿಗದಿಪಡಿಸಿದ್ದು, ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ರಜೆಗಳನ್ನು ನೀಡಲಾಗಿದೆ. ಪ್ರತಿವರ್ಷ ಈ ಮಧ್ಯಂತರ ರಜೆಯನ್ನು ಅ.3 ರಿಂದ ಅ.31ರ ವರೆಗೆ ನೀಡಲಾಗುತ್ತಿತ್ತು. ಆದರೆ ಈ ರಜೆಯನ್ನು ಕಡಿತಗೊಳಿಸಿದ್ದು, ಮಕ್ಕಳಲ್ಲಿ ತೀವ್ರ ನಿರಾಸೆಯನ್ನು ಉಂಟು ಮಾಡಿದೆ’ ಎಂದು ಸಂಘದ ಅಧ್ಯಕ್ಷ ಶಂಭುಲಿಂಗಗೌಡ ಪಾಟೀಲ ಪತ್ರದಲ್ಲಿ ವಿವರಿಸಿದ್ದಾರೆ. 

‘ಶಾಲೆಗಳಿಗೆ ಮಧ್ಯಂತರ ದಸರಾ ರಜೆಯನ್ನು ಹಾಗೂ ಬೇಸಿಗೆ ರಜೆಯನ್ನು ನೀಡಲು ಅದರದೇ ಅದಂತಹ ವೈಜ್ಞಾನಿಕ ಕಾರಣಗಳಿವೆ. ಮಕ್ಕಳ ಶಿಕ್ಷಣ ಮತ್ತು ಭೌತಿಕ ಬೆಳವಣಿಗೆ ಹಿತದೃಷ್ಟಿಯಿಂದ ರಜೆ ದಿನಗಳನ್ನು ಹಾಗೂ ಒಟ್ಟು ಕಾರ್ಯನಿರ್ವಹಿಸಬೇಕಾದ ಶಾಲಾ ದಿನಗಳನ್ನು ವೈಜ್ಞಾನಿಕವಾಗಿ ನಿರ್ಧರಿಸಲಾಗುತ್ತದೆ. ಈ ಎಲ್ಲ ಪ್ರಮುಖ ಅಂಶಗಳ ಜೊತೆಗೆ ಕೋವಿಡ್ ಕಾರಣಗಳಿಂದ ಈ ವರ್ಷ ಶಾಲೆಗಳಲ್ಲಿ ಮಕ್ಕಳ ಕಲಿಕಾ ಕಂದಕವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಬೇಸಿಗೆ ರಜೆಯನ್ನು ಮಟುಕುಗೊಳಿಸಿ, ‘ಕಲಿಕಾ ಚೇತರಿಕಾ’ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು’ ಎಂದು ಅವರು ಉಲ್ಲೇಖಿಸಿದ್ದಾರೆ. 

‘ಕಲಿಕಾ ಚೇತರಿಕಾ’ ಕಾರ್ಯಕ್ರಮವನ್ನು ಜಾರಿ ಮಾಡಿ, ಈ ಬಾರಿ 15 ದಿನಗಳ ಮುಂಚಿತವಾಗಿ ಶಾಲೆಗಳನ್ನು ಪ್ರಾರಂಭಿಸಿದ್ದು, ದಸರಾ ರಜೆಯನ್ನೂ ಕಡಿತಗೊಳಿಸಲಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯತ್ಯಾಸ ಆಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News