ಡಿಎನ್‍ಎ ಮಾದರಿ ಹೊಂದಾಣಿಕೆ ಆಗದಿದ್ದರೂ ಆರೋಪಿ ಅತ್ಯಾಚಾರವೆಸಗಿಲ್ಲ ಎಂದು ಹೇಳಲು ಆಗುವುದಿಲ್ಲ: ಹೈಕೋರ್ಟ್

Update: 2022-10-10 13:14 GMT

ಬೆಂಗಳೂರು, ಅ.10: ಡಿಎನ್‍ಎ(ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ) ಮಾದರಿ ಹೊಂದಾಣಿಕೆಯಾಗದಿದ್ದರೆ ಆರೋಪಿ ಅತ್ಯಾಚಾರವೆಸಗಿಲ್ಲ ಎಂದು ಹೇಳಲು ಆಗುವುದಿಲ್ಲ ಎಂಬುದಾಗಿ ಹೈಕೋರ್ಟ್ ಹೇಳಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭ ಧರಿಸಲು ಕಾರಣನಾಗಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿರುವ ಮೈಸೂರು ಜಿಲ್ಲೆಯ 43 ವರ್ಷದ ನಿರ್ವಾಹಕ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ. ಅರ್ಜಿಯನ್ನು ತಿರಸ್ಕರಿಸಿದೆ. 

ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯ ತಾಯಿಯು 2021ರ ಫೆ.19ರಂದು ಆರೋಪಿ ವಿರುದ್ಧ ದೂರು ದಾಖಲಿಸಿ, ಬಸ್ ಕಂಡಕ್ಟರ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದರು.

ಆರೋಪಿಯ ರಕ್ತದ ಮಾದರಿ ಹಾಗೂ ಭ್ರೂಣಕ್ಕೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯು ಸಂತ್ರಸ್ತ ಬಾಲಕಿಯ ಗರ್ಭಧಾರಣೆಗೆ ನಾನು ಹೊಣೆಗಾರನಲ್ಲ ಎಂದು ವಾದಿಸಿ ಕೋರ್ಟ್ ಮೆಟ್ಟಿಲೇರಿದ್ದನು.

ಆರೋಪಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಬಾಲಕಿ ಹೇಳಿಕೆ ನೀಡಿದ್ದು ಡಿಎನ್‍ಎ ವರದಿ ನೆಗಟೀವ್ ಬಂದಿದ್ದರೂ ವಿಚಾರಣೆ ಮುಂದುವರಿಸಬೇಕೆಂದು ಸರಕಾರಿ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಡಿಎನ್‍ಎ ಪರೀಕ್ಷೆಯಲ್ಲಿ ಆರೋಪಿಯು ಭ್ರೂಣದ ಜೈವಿಕ ತಂದೆಯಲ್ಲ ಎಂದು ತೋರಿಸಿದ್ದರೂ ಅರ್ಜಿದಾರರನ್ನು ಅತ್ಯಾಚಾರದ ಅಪರಾಧಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸುವುದಿಲ್ಲ ಎಂದು ಹೇಳಿದೆ.

ಡಿಎನ್‍ಎ ಪರೀಕ್ಷೆಯನ್ನು ದೃಢೀಕರಿಸುವ ಸಾಕ್ಷಿವೆಂದು ಪರಿಗಣಿಸಿರುವ ನ್ಯಾಯಾಲಯ ಆರೋಪಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ. ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಡಿಎನ್‍ಎ ಪರೀಕ್ಷೆ ನಿರ್ಣಾಯಕಯಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News