ಮೀಸಲಾತಿ ಹೆಚ್ಚಳದ ಕ್ರೆಡಿಟ್ ನಾವು ತೆಗೆದುಕೊಳ್ಳುತ್ತೇವೆ: ನಳಿನ್ ಕುಮಾರ್ ಕಟೀಲ್

Update: 2022-10-11 11:07 GMT

ಹಾವೇರಿ, ಆ.11: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ತೀರ್ಮಾನವನ್ನು ನಾವು ಕೈಗೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಅದರ ಶ್ರೇಯಸ್ಸನ್ನು ತೆಗೆದುಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿಂದ ಚಳವಳಿ ಆರಂಭಿಸಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಹಿಂದುಳಿದ ಸಮಾಜಗಳಿಗೆ ನ್ಯಾಯವನ್ನೇ ಕೊಡಲಿಲ್ಲ. ಆಗ ಅಹಿಂದಕ್ಕೆ ನ್ಯಾಯ ಕೊಡದ ಅವರು ಈಗ ನಾವು ಕೊಟ್ಟಾಗ ಅಸಮಾಧಾನ ತೋರಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯಗೆ ತಮ್ಮ ಅಧಿಕಾರಾವಧಿಯಲ್ಲಿ ಮೀಸಲಾತಿ ಕೊಡುವ ಯೋಗ್ಯತೆ ಇರಲಿಲ್ಲವೇ? ಒಂದು ಆಯೋಗ ರಚಿಸಿ ಏನೂ ತೀರ್ಮಾನ ಕೈಗೊಳ್ಳದ ಸಿದ್ದರಾಮಯ್ಯ, ವೀರಶೈವ-ಲಿಂಗಾಯತ ಸಮಾಜವನ್ನು ಒಡೆದು ಆಳಿದರು. ಅದು ಬಿಟ್ಟು ಏನು ಮಾಡಿದ್ದಾರೆ. ಅವರಿಗೆ ಎಲ್ಲಿ ನೈತಿಕತೆ ಇದೆ? ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.

ಎರಡು ಸಮುದಾಯಗಳ ಬೇಡಿಕೆ ಅನ್ವಯ ಮೀಸಲಾತಿಯಲ್ಲಿ ಕೆಲ ಬದಲಾವಣೆ ಮಾಡಿ ಅವುಗಳನ್ನು ಈಡೇರಿಸಿದ್ದೇವೆ. ಈ ಸಂಬಂಧ ಇನ್ನೂ ಹತ್ತಾರು ಯೋಚನೆಗಳಿವೆ. ಅವುಗಳನ್ನು ಸರಕಾರ ಮಾಡಲಿದೆ ಎಂದು ಅವರು ನುಡಿದರು.

ರಾಜ್ಯ ಸರಕಾರದ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಭ್ರಷ್ಟಾಚಾರವನ್ನು ಪ್ರಾರಂಭ ಮಾಡಿದ್ದೇ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯ ತಾತ. ಭ್ರಷ್ಟಾಚಾರದ ಇನ್ನೊಂದು ಹೆಸರೇ ಕಾಂಗ್ರೆಸ್. ಭಯೋತ್ಪಾದನೆಯ ಇನ್ನೊಂದು ಹೆಸರೇ ಕಾಂಗ್ರೆಸ್. ಭ್ರಷ್ಟಾಚಾರದ ಒಬ್ಬ ಫಲಾನುಭವಿ ರಾಹುಲ್ ಗಾಂಧಿ. ಅದಕ್ಕಾಗಿಯೇ ಅವರು ಜಾಮೀನಿನಲ್ಲಿದ್ದಾರೆ ಎಂದರು.

ಜನಸಂಕಲ್ಪ ಯಾತ್ರೆ: ಜನಸಂಕಲ್ಪ ಯಾತ್ರೆಗಳನ್ನು ಆರಂಭಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ರಾಯಚೂರು ಕಡೆಯಿಂದ ಪ್ರವಾಸ ನಡೆಸಲಾಗುತ್ತಿದೆ. ನಾನು ಬೆಳಗಾವಿಯಿಂದ ಪ್ರವಾಸ ಆರಂಭಿಸಿದ್ದು, ಇವತ್ತು ಹಾವೇರಿ ಜಿಲ್ಲೆಯಲ್ಲಿದ್ದೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಚುನಾವಣೆ ಎದುರಿಸಲು ಮತ್ತು ಕಾರ್ಯಕರ್ತರನ್ನು ಸನ್ನದ್ಧಗೊಳಿಸಲು ಪ್ರವಾಸ ನಡೆಯುತ್ತಿದೆ. ಕೇಂದ್ರ-ರಾಜ್ಯ ಸರಕಾರಗಳ ಜನಪರ ಯೋಜನೆಗಳ ಕುರಿತು ಜನರಿಗೆ ಮನದಟ್ಟು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News