×
Ad

ಬಾಬಾಬುಡಾನ್ ಗಿರಿ ‘ದತ್ತ ಪೀಠ’ಕ್ಕೆ ಅರ್ಚಕರ ನೇಮಕ ಮಾಡದಿದ್ದಲ್ಲಿ ಅನಾಹುತಗಳಿಗೆ ಸರಕಾರವೇ ಹೊಣೆ: ಶ್ರೀರಾಮಸೇನೆ

Update: 2022-10-11 18:12 IST

ಚಿಕ್ಕಮಗಳೂರು, ಅ.11: ಶ್ರೀರಾಮಸೇನೆ ವತಿಯಿಂದ ನ.7ರಿಂದ 13ರವರೆಗೆ ದತ್ತಮಾಲಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಗುರುದತ್ತಾತ್ರೇಯ ಬಾಬಾಬುಡನ್‍ಗಿರಿಯಲ್ಲಿ ನ.13ರ ಕಾರ್ಯಕ್ರಮದ ದಿನದಂದೇ ರಾಜ್ಯ ಸರಕಾರ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು. ತಪ್ಪಿದಲ್ಲಿ ಅಲ್ಲಿನ ಆಗುವ ಅನಾಹುತಗಳಿಗೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ. 

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದ್ದು, ನ.7ರಂದು ದತ್ತಭಕ್ತರು ದತ್ತಮಾಲೆ ಧರಿಸಲಿದ್ದಾರೆ. ನ.10ರಂದು ದತ್ತ ದೀಪೋತ್ಸವ, ನ.12ರಂದು ಪಡಿ ಸಂಗ್ರಹ (ಭೀಕ್ಷಾಟನೆ) ನಡೆಯಲಿದೆ. ನ.13ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆಯೊಂದಿಗೆ ದತ್ತಪೀಠದಲ್ಲಿ ಹೋಮ ಹವನ, ಧರ್ಮಸಭೆ ನಡೆಯಲಿದೆ. ಶ್ರೀರಾಮಸೇನೆ ನ.13ರಂದು ನಡೆಸುವ ಕಾರ್ಯಕ್ರಮದ ದಿನದಂದೇ ರಾಜ್ಯ ಸರಕಾರ ಹಿಂದೂ ಅರ್ಚಕರನ್ನು ನೇಮಕ ಮಾಡಲೇಬೇಕು. ತಪ್ಪಿದಲ್ಲಿ ಅಲ್ಲಿ ನಡೆಯುವ ಅನಾಹುತಗಳಿಗೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು. 

ಗುರುದತ್ತಾತ್ರೇಯ ಬಾಬಾಬುಡನ್‍ಗಿರಿ, ದತ್ತನ ಹೆಸರು ಹೇಳಿಕೊಂಡು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರ ಸಿಕ್ಕ ಬಳಿಕ ದತ್ತನನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹಿಂದುಗಳು ಸರಕಾರದ ಈ ನಿಲುವನ್ನು ಅರ್ಥ ಮಾಡಿಕೊಂಡಿದ್ದಾರೆ. ನ.13ರೊಳಗೆ ರಾಜ್ಯ ಸರಕಾರ ಗುರುದತ್ತಾತ್ರೇಯ ಬಾಬಾಬುಡಾನ್‍ಗಿರಿಯ ಹೆಸರನ್ನು ದತ್ತಪೀಠ ಎಂದು ನಾಮಕರಣ ಮಾಡುವುದರೊಂದಿಗೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು. ತಪ್ಪಿದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ಮುಖಂಡರ ವಿರುದ್ಧ ತೋರಿದ ಆಕ್ರೋಶವನ್ನು ಇಲ್ಲೂ ತೋರಲಿದ್ದಾರೆ ಎಂದ ಅವರು, ಗುರುದತ್ತಾತ್ರೇಯ ಬಾಬಾಬುಡನ್‍ಗಿರಿಯಲ್ಲಿ ಇಸ್ಲಾಂ ಧರ್ಮದ ಚಟುವಟಿಕೆಗೆ ಅವಕಾಶ ನೀಡಬಾರದು. ದತ್ತಪೀಠದಲ್ಲಿರುವ ಗೋರಿಗಳನ್ನು ಸ್ಥಳಾಂತರ ಮಾಡಬೇಕು. ದತ್ತಪೀಠದಲ್ಲಿ ವಿಗ್ರಹ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಬೇಕು. ದತ್ತಪೀಠದಲ್ಲಿ ವಿಗ್ರಹ, ಕಾಣಿಕೆ ವಸ್ತುಗಳು ಕಾಣಿಯಾಗಿರುವ ಮತ್ತು ಆಸ್ತಿಪಾಸ್ತಿಗಳ ಅಕ್ರಮ ಹಸ್ತಾಂತರ ಹಾಗೂ ಮಾರಾಟವಾಗಿದ್ದರ ಬಗ್ಗೆ ತನಿಖೆ ನಡೆಸಿ ಪುನರ್ ಪ್ರತಿಷ್ಠಾಪಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಶ್ರೀರಾಮ ಸೇನೆ ದತ್ತಪೀಠ ವಿಚಾರವಾಗಿ 18ವರ್ಷಗಳ ಸುಧೀರ್ಘ ಹೋರಾಟ ನಡೆಸುತ್ತಿದೆ. ನ್ಯಾಯಾಲಯ ಹಿಂದೂ ಅರ್ಚಕರ ನೇಮಕ ಮಾಡುವಂತೆ ಆದೇಶಿಸಿದೆ. ಸದನ ಸಮಿತಿ ವರದಿ ನೀಡಿದೆ. ಆದರೆ, ಹಿಂದೂ ಅರ್ಚಕರ ನೇಮಕ ಮಾಡಲು ರಾಜ್ಯ ಸರಕಾರ ಮೀನಾಮೇಷ ಮಾಡುತ್ತಿದೆ. ಇದು ಬೇಸರದ ಸಂಗತಿ ಎಂದ ಅವರು, ನ.13ರೊಳಗೆ ರಾಜ್ಯ ಸರಕಾರ ಹಿಂದೂ ಅರ್ಚಕರನ್ನು ನೇಮಕ ಮಾಡದಿದ್ದಲ್ಲಿ ಬೃಹತ್ ಹೋರಾಟ ಮಾಡಲಾಗುವುದು. ಅಹಿತಕರ ಘಟನೆ ಸಂಭವಿಸಿದರೇ ರಾಜ್ಯ ಸರಕಾರವೇ ಹೊಣೆ ಎಂದು ಎಚ್ಚರಿಸಿದ ಅವರು, ಹಿಂದೂ ಅರ್ಚಕರ ನೇಮಕ ಮಾಡಲು ಸರಕಾರ ಮೀನಮೇಷ ಎಣಿಸಿದಲ್ಲಿ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಸರಕಾರದ ವಿರುದ್ಧ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ರಾಜ್ಯ ಉಪಾಧ್ಯಕ್ಷ ಮಹೇಶ್‍ಕುಮಾರ್ ಕಟ್ಟಿಮನೆ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ತಾಲೂಕು ಅಧ್ಯಕ್ಷ ಜ್ಞಾನೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಗೌಡ, ವಿಭಾಗ ಅಧ್ಯಕ್ಷ ಸತೀಶ್ ಪೂಜಾರಿ, ದುರ್ಗಾಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ, ತಾಲೂಕು ಅಧ್ಯಕ್ಷೆ ನವೀನಾ, ರುದ್ರೇಗೌಡ, ಯಶ್ವಂತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News