ಬಾಬಾಬುಡಾನ್ ಗಿರಿ ದತ್ತಪೀಠ ವಿವಾದ: ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಆದೇಶ

Update: 2022-10-11 14:24 GMT

ಬೆಂಗಳೂರು, ಅ.11: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಬಾಬಾಬುಡಾನ್ ಗಿರಿಯ ದತ್ತಪೀಠದ ಪೂಜಾ ಕೈಂಕರ್ಯ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ಹೊರಡಿಸಿದೆ. 

ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮುಸ್ಲಿಮ್ ಮೌಲ್ವಿ ಸೈಯದ್ ಗೌಸ್ ಮೊಹಿಯುದ್ದೀನ್ ಶಾ ಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮಧ್ಯಂತರ ಆದೇಶ ಮುಂದುವರಿಕೆಗೆ ಸೂಚನೆ ನೀಡಿ, ವಿಚಾರಣೆಯನ್ನು 3 ವಾರಗಳ ಕಾಲ ಮುಂದೂಡಿಕೆ ಮಾಡಿದೆ. ಅಲ್ಲದೆ, ಸದ್ಯ ಈ ಹಿಂದೆ ಇದ್ದಂತೆಯೇ ಪೂಜಾ ವಿಧಿ ವಿಧಾನಗಳು ಮುಂದುವರಿಯಲಿದೆ ಎಂದು ತಿಳಿಸಿದೆ. 

ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಮುಝಾವರ್ ಹಾಗೂ ಅರ್ಚಕರಿಂದ ಪೂಜಾವಿಧಿಗೆ ಅವಕಾಶ ಕಲ್ಪಿಸಲು ಸಂಪುಟದ ಉಪಸಮಿತಿ ಶಿಫಾರಸ್ಸಿನ ನಿರ್ಧಾರವನ್ನು ಹೈಕೋರ್ಟ್‍ಗೆ ಸಲ್ಲಿಕೆ ಹಿನ್ನೆಲೆಯಲ್ಲಿ ಸರಕಾರದ ನಿರ್ಧಾರಕ್ಕೆ ಸೈಯದ್ ಗೌಸ್ ಮೊಹಿಯುದ್ದೀನ್ ಶಾ ಖಾದ್ರಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ಅರ್ಜಿದಾರರ ಆಕ್ಷೇಪಣೆ ಪ್ರತಿ ಸರಕಾರಿ ವಕೀಲರಿಗೆ ನೀಡಲು ಸೂಚನೆ ನೀಡಿದ ಹೈಕೋರ್ಟ್ ನ್ಯಾಯಪೀಠ, ಯಥಾಸ್ಥಿತಿ ಮುಂದುವರಿಸಲು ಆದೇಶ ನೀಡಿದೆ. ಈ ಮಧ್ಯೆ ಸರಕಾರ ಕಳೆದ ವಿಚಾರಣೆ ವೇಳೆ ಹೈಕೋರ್ಟ್‍ಗೆ ಮೆಮೋ ಸಲ್ಲಿಸಿ, ದತ್ತ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಧರ್ಮಗಳ ಸಂಪ್ರದಾಯಗಳಂತೆ ಪೂಜಾ ಕೈಂಕರ್ಯ ನೆರವೇರಿಸಲು ಅವಕಾಶ ಕಲ್ಪಿಸಲು ಕೈಗೊಂಡಿರುವ ನಿರ್ಣಯದ ಕುರಿತು ಹೈಕೋರ್ಟ್‍ಗೆ ಮಾಹಿತಿ ನೀಡಿದೆ. 

ಸರಕಾರಿ ವಕೀಲರ ಮೆಮೋ ಪರಿಗಣಿಸಿದ್ದ ನ್ಯಾಯಪೀಠ, ಸರಕಾರವು ಅದರ ಪ್ರತಿಯನ್ನು ಮೇಲ್ಮನವಿದಾರರಿಗೆ ಒದಗಿಸಬೇಕು. ಸರಕಾರದ ನಿರ್ಧಾರಕ್ಕೆ ಅರ್ಜಿದಾರರಿಗೆ ಯಾವುದಾದರೂ ಆಕ್ಷೇಪಣೆಯಿದ್ದರೆ ಸಲ್ಲಿಸಬಹುದು ಎಂದು ಸೂಚಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು.

ಅಲ್ಲದೆ, ಸಮಿತಿಯ ನಿರ್ಣಯವು ಈ ಮೇಲ್ಮನವಿ ಕುರಿತ ವಿಭಾಗೀಯ ಪೀಠದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಒಂದೊಮ್ಮೆ ಈ ಅವಧಿಯಲ್ಲಿ ಸರಕಾರವು ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಾನದಲ್ಲಿ ಯಾವುದೇ ಮಾರ್ಪಾಡು ಮಾಡಿದರೆ, ಆ ಕುರಿತು ಪ್ರಶ್ನಿಸಿ ಸೂಕ್ತ ಅರ್ಜಿ ಸಲ್ಲಿಸಲು ಪಕ್ಷಗಾರರಿಗೆ ಅವಕಾಶವಿದೆ ಎಂದು ತಿಳಿಸಿ 2022ರ ಮೇ 31ರಂದು ಹೊರಡಿಸಿರುವ ಆದೇಶವು ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿತ್ತು. 

ವರದಿಯಲ್ಲಿ 10 ಶಿಫಾರಸು: ಸರಕಾರಿ ವಕೀಲರು ಮೆಮೋ ಸಲ್ಲಿಸಿ, 2021ರ ಸೆ.28ರ ಹೈಕೋರ್ಟ್ ಏಕಸದಸ್ಯಪೀಠದ ಆದೇಶದಂತೆ ಸರಕಾರ ರಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯನ್ನು ಪ್ರಕರಣವನ್ನು ಮರು ಪರಿಶೀಲನೆ ನಡೆಸಿ 2022ರ ಜೂ.30ರಂದು ವರದಿ ಸಲ್ಲಿಸಿತ್ತು.

ವರದಿಯಲ್ಲಿ 10 ಶಿಫಾರಸು ಮಾಡಲಾಗಿದ್ದು, ಅದನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಹೇಳಿದ್ದರು. ಅಲ್ಲದೆ, ಸಚಿವ ಸಂಪುಟ ಉಪ ಸಮಿತಿಯ ವರದಿ ಆಧರಿಸಿ ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಸಂಪ್ರದಾಯಗಳದಂತೆ ಪೂಜಾ ವಿಧಿ ವಿಧಾನ ನೆರವೇರಿಸುವುದಕ್ಕೆ ಅವಕಾಶ ಕಲ್ಪಿಸಲು 2022ರ ಜು.1ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. 

ದತ್ತಾತ್ರೇಯ ಪೀಠದಲ್ಲಿ ಪೂಜೆ ನೆರವೇರಿಸಲು ಮುಝಾವರ್ ಮತ್ತು ಅರ್ಚಕರನ್ನು ನೇಮಿಸಲು 2022 ಜು.19ರಂದು ಆದೇಶಿಸಲಾಗಿದೆ. ಹಾಗೆಯೇ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಆ.13ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸರಕಾರಿ ಪರ ವಕೀಲರು ಪೀಠಕ್ಕೆ ತಿಳಿಸಿದ್ದರು.

ಪ್ರಕರಣವೇನು?: ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿಯುದ್ದೀನ್ ಅವರನ್ನು ನೇಮಿಸಿ ರಾಜ್ಯ ಸರಕಾರ 2018ರಲ್ಲಿ ಆದೇಶಿಸಿತ್ತು. ಅದನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯಪೀಠ, ಪ್ರಕರಣವನ್ನು ಸರಕಾರಕ್ಕೆ ಹಿಂದಿರುಗಿಸಿತ್ತು. ಅಲ್ಲದೆ, ಪ್ರಕರಣದ ಕುರಿತು ರಚನೆ ಮಾಡಲಾಗಿದ್ದ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿ ಗಣನೆಗೆ ತೆಗೆದುಕೊಳ್ಳದೇ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು 2021ರ ಸೆ.28ರಂದು ನಿರ್ದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಗೌಸ್ ಮೊಹಿಯುದ್ದೀನ್ ಮೇಲ್ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News