ಮಂಡ್ಯ | ಶಿಕ್ಷಕಿಗೆ ಲೈಂಗಿಕ ಕಿರುಕುಳ ಆರೋಪ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ

Update: 2022-10-11 14:26 GMT

ಮಂಡ್ಯ, ಅ.11: ಮಳವಳ್ಳಿ ತಾಲೂಕು ನಲ್ಲೀಗೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಆ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಪ್ರಕರಣದ ಆರೋಪಿಗಳನ್ನು ಕೂಡಲೇ ಅಮಾನತುಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಂಗ ತನಿಖೆ ನಡೆಸಬೇಕು. ಶಿಕ್ಷಕಿಯ ಅಮಾನತು ಆದೇಶ ಹಿಂಪಡೆದು ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ಪರಿಶಿಷ್ಟ ಜಾತಿಗೆ ಸೇರಿದ ಶಿಕ್ಷಕಿಗೆ ಶಾಲೆಯ ಈ ಹಿಂದಿನ ಮುಖ್ಯಶಿಕ್ಷಕ ಎಂ.ಸಿ.ಪ್ರಭುಸ್ವಾಮಿ, ಹಾಲಿ ಮುಖ್ಯಶಿಕ್ಷಕಿ ಸುವರ್ಣ, ಬಿಇಒ ಚಿಕ್ಕಸ್ವಾಮಿ, ಇಸಿಒ ಸಿದ್ದರಾಜು, ಅಧೀಕ್ಷಕ ಕುಮಾರಸ್ವಾಮಿ, ಎಸ್‍ಡಿಎಂಸಿ ಅಧ್ಯಕ್ಷ ಕುಮಾರ್ ಅವರು ಜಾತಿ ನಿಂದನೆ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತರಗತಿಗೆ ಗೈರುಹಾಜರಾಗಿ ತಲೆಮರೆಸಿಕೊಂಡಿದ್ದರೂ ಶಿಕ್ಷಣ ಇಲಾಖೆ ಆರೋಪಿಗಳನ್ನು ಅಮಾನತು ಮಾಡುವ ಬದಲು ನೊಂದ ಶಿಕ್ಷಕಿಗೇ ನೊಟೀಸ್ ಜಾರಿ ಮಾಡಲಾಗಿದೆ. ಕೂಡಲೇ ಆರೋಪಿಗಳನ್ನು ಅಮಾನತುಪಡಿಸಬೇಕು. ಇಲ್ಲದಿದ್ದರೆ ಕರ್ತವ್ಯಲೋಪ ಎಸಗಿರುವ ಡಿಡಿಪಿಐ ವಿರುದ್ಧ ಸಂಘಟನೆ ವತಿಯಿಂದ ಪ್ರಕರಣ ದಾಖಲು ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ಸಮಿತಿ ರಾಜ್ಯ ಮುಖಂಡ ಎಸ್.ಪೂರ್ಣಚಂದ್ರ, ಜಿಲ್ಲಾ ಸಂಚಾಲಕ ರಮಾನಂದ ತರೀಕೆರೆ ಕಾಲನಿ, ಸುರೇಶ್, ಅಮ್ಜದ್ ಪಾಷ, ಟಿ.ಡಿ.ನಾಗರಾಜು, ಕುಮಾರ, ನಾಗಮ್ಮ, ಚಂದ್ರಶೇಖರ್, ಜ್ಯೋತಿ, ಇತರರು ಧರಣಿಯಲ್ಲಿ ಭಾಗವಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News