ಚಿತ್ರದುರ್ಗ: ಮಹಿಳಾ ಪ್ರತಿನಿಧಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ

Update: 2022-10-11 17:24 GMT

ಬೆಂಗಳೂರು, ಅ.11: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದಿಂದ ಮಂಗಳವಾರ ಬೆಳಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಳೆಯನ್ನು ಲೆಕ್ಕಿಸದೆ ಭಾರತ ಜೋಡೋ ಯಾತ್ರೆಯನ್ನು ಆರಂಭಿಸಿದರು. ಕಳೆದ ಎರಡು ದಿನಗಳಿಂದ ಹಿರಿಯೂರಿನಲ್ಲಿ ಮಳೆಯಾಗುತ್ತಿದೆ. ಆದರೂ, ಯಾತ್ರೆಯನ್ನು ಸ್ಥಗಿತಗೊಳಿಸದೆ ರಾಹುಲ್ ಗಾಂಧಿ ಮುಂದುವರೆದಿದ್ದು, ಅವರಿಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಾಥ್ ನೀಡುತ್ತಿದ್ದಾರೆ.

ಬೆಳಗಿನ ಉಪಹಾರ ಹಾಗೂ ವಿರಾಮಕ್ಕಾಗಿ ಸಾಣಿಕೆರೆ ಬಳಿ ಹೊಟೇಲ್‍ನಲ್ಲಿ ತಂಗಿದ ರಾಹುಲ್ ಗಾಂಧಿ, ನರೇಗಾ ಕೂಲಿ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ರಸ್ತೆಗಳಲ್ಲಿ ಕಸ ಆಯುವ ಮಹಿಳೆಯರ ಜೊತೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು.

ಈ ವರ್ಗದವರಿಗೆ ಆಗುತ್ತಿರುವ ತೊಂದರೆಗಳು, ಸರಕಾರದಿಂದ ಅವರಿಗೆ ಅಗತ್ಯವಿರುವ ನೆರವಿನ ಬಗ್ಗೆ ಚರ್ಚೆ ನಡೆಸಿದ ರಾಹುಲ್ ಗಾಂಧಿ, ಕೈಗಳಿಲ್ಲದಿದ್ದರೂ ಕಾಲಲ್ಲೇ ಬರೆದು ಶಿಕ್ಷಕಿಯಾದ ಲಕ್ಷ್ಮಿದೇವಿ ಅವರೊಂದಿಗೂ ಚರ್ಚೆ ಮಾಡಿದರು. ಅಲ್ಲದೆ, ಅವರು ಕಾಲಿನಿಂದ ಬರೆಯುವುದನ್ನು ಸ್ವತಃ ತಮ್ಮ ಮೊಬೈಲ್ ನಿಂದ ವೀಡಿಯೋ ಚಿತ್ರಿಸಿಕೊಂಡು ಲಕ್ಷ್ಮಿದೇವಿಯ ಛಲವನ್ನು ಕೊಂಡಾಡಿದರು.

ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಎದುರಾಗುವ ಸಾಧಕ, ಬಾಧಕಗಳ ಕುರಿತು ಚರ್ಚಿಸಿದ ರಾಹುಲ್ ಗಾಂಧಿ, ಮಹಿಳೆಯರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾಣಿಕೆರೆಯಲ್ಲಿ ಸಾಗಿದ ಪಾದಯಾತ್ರೆ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿದ್ದ ಕೂಲಿ ಕಾರ್ಮಿಕರ ಕೈ ಹಿಡಿದು ರಾಹುಲ್ ಗಾಂಧಿ ಹೆಜ್ಜೆ ಹಾಕಿದರು. ಈ ವೇಳೆ ಅನೇಕ ಶಾಲೆಯ ಮಕ್ಕಳು ರಾಹುಲ್ ಗಾಂಧಿಯನ್ನು ನೋಡಲು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ಚಿತ್ರದುರ್ಗದ ವಕೀಲರ ತಂಡವು ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News