ನಕಲಿ ಶ್ಯೂರಿಟಿ: ಹಲವು ನಿರ್ದೇಶನಗಳನ್ನು ನೀಡಿದ ಹೈಕೋರ್ಟ್

Update: 2022-10-11 17:32 GMT

ಬೆಂಗಳೂರು, ಅ.11: ಜಾಮೀನಿನ ಮೇಲೆ ಬಿಡುಗಡೆ ಹೊಂದಲು ನಕಲಿ ದಾಖಲೆಗಳನ್ನು ಸಲ್ಲಿಸಿ ಶ್ಯೂರಿಟಿ ನೀಡುತ್ತಿರುವ ಕೇಸ್‍ಗಳು ಹೆಚ್ಚಳ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಶ್ಯೂರಿಟಿ ನೀಡುವವರ ಸಂಪೂರ್ಣ ವಿವರವನ್ನು ಪರಿಶೀಲನೆಗೊಳಪಡಿಸಿ ಖಾತರಿಪಡಿಸಿಕೊಳ್ಳಬೇಕೆಂದು ವಿಚಾರಣಾ ನ್ಯಾಯಾಲಯಗಳಿಗೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ.  

ಅರ್ಜಿದಾರ ನಾರಾಯಣ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಈ ಕೆಳಗಿನ ನಿರ್ದೇಶನಗಳನ್ನು ಹೈಕೋರ್ಟ್ ನ್ಯಾಯಪೀಠವು ನೀಡಿದೆ. 

ಸಾಲ್ವೆನ್ಸಿ ಸರ್ಟಿಫಿಕೇಟ್‍ನಲ್ಲಿ ಸಂಬಂಧಪಟ್ಟ ಇಲಾಖೆಯು ಭದ್ರತೆ ನೀಡುವವ ಭಾವಚಿತ್ರ, ಸಹಿ ಇಲ್ಲವೇ ಬೆರಳಿನ ಗುರುತು ಪಡೆಯಬೇಕು ಮತ್ತು ಅದನ್ನು ದೃಢೀಕರಿಸಬೇಕು. ಸರ್ಟಿಫಿಕೇಟ್ ಜತೆಗೆ ಸ್ವದೃಢೀಕೃತ ಆಧಾರ್ ಕಾರ್ಡ್‍ನ ಪ್ರತಿಯನ್ನೂ ಸಲ್ಲಿಸಬೇಕು. ಶ್ಯೂರಿಟಿ ನೀಡುವುದಕ್ಕಾಗಿ ಪದೇ ಪದೆ ಹಾಜರಾಗಿದ್ದಾರೆಯೇ? ಎಂಬುದನ್ನು ಖಾತರಿ ಪಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶನದಲ್ಲಿ ತಿಳಿಸಿದೆ.

ಕೋರ್ಟ್‍ಗಳು ಬಳಕೆ ಮಾಡುವ ಕೇಸ್‍ನ ಮಾಹಿತಿ ಸಾಫ್ಟ್ ವೇರ್ ನಲ್ಲಿ ಭದ್ರತೆ ನೀಡಿರುವವರ ಹೆಸರು, ಅಪರಾಧ ಸಂಖ್ಯೆ, ಪೊಲೀಸ್ ಠಾಣೆ, ಆರೋಪಿ ಹೆಸರುಗಳ ಮಾಹಿತಿ ಲಭ್ಯವಾಗುವಂತೆ ಮಾಡಬೇಕು. ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಮತ್ತು ಸೆಂಟ್ರಲ್ ಪ್ರಾಜೆಕ್ಟ್ ಸಮನ್ವಯಕಾರರು ಎಲ್ಲ ನ್ಯಾಯಾಲಯಗಳಿಗೆ ಭದ್ರತೆಗಳ ನೋಂದಣಿ ನಿರ್ವಹಣೆಗೆ ಸಂಬಂಧಿಸಿದಂತೆ ಮಾಡ್ಯೂಲ್ ಸಿದ್ಧಪಡಿಸಬೇಕು. ಇದು ರಾಜ್ಯದ ಎಲ್ಲ ನ್ಯಾಯಾಲಯಗಳು ಒಂದೇ ರೀತಿಯಾಗಿರಬೇಕು ಎಂದು ನ್ಯಾಯಪೀಠವು ನಿರ್ದೇಶನ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News