ಮೊರಾರ್ಜಿ ವಸತಿ ಶಾಲೆಗಳಲ್ಲಿ RSS ತಾಲೀಮು ಶಿಬಿರಕ್ಕೆ ಅನುಮತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

Update: 2022-10-12 11:52 GMT

ಬೆಂಗಳೂರು, ಅ. 12: ‘ಮೊರಾರ್ಜಿ ವಸತಿ ಶಾಲೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ಕ್ಕೆ ಅನುಮತಿ ನೀಡುವ ವಿಚಾರದಲ್ಲಿ ವಿವಾದದ ಪ್ರಶ್ನೆ ಇಲ್ಲ. ರಾಷ್ಟ್ರಪ್ರೇಮ ಕಲಿಸುತ್ತೇವೆಂದು ಅರ್ಜಿ ಸಲ್ಲಿಸಿದ್ದು, ಪರಿಶೀಲಿಸಿ ಅವರಿಗೆ ಅನುಮತಿ ನೀಡಲಾಗಿದೆ' ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅನುಮತಿ ನೀಡಬಾರದು ಎಂದು ಎಲ್ಲೂ ಹೇಳಿಲ್ಲ. ರಾಷ್ಟ್ರಪ್ರೇಮ ಕಲಿಸ್ತೇವೆಂದು ಅರ್ಜಿ ಹಾಕಿದ್ದರು. ಹೀಗಾಗಿ ಅವರಿಗೆ ಪರಿಶೀಲನೆ ಮಾಡಿ ಅನುಮತಿ ನೀಡಿದ್ದೇನೆ. ಬೇರೆ ಯಾರೇ ಅರ್ಜಿ ಹಾಕಿದರೂ ಪರಿಶೀಲಿಸ್ತೇವೆ. ನಾವು ರಾಷ್ಟ್ರಪ್ರೇಮ ಕಲಿಸ್ತೇವೆಂದು ಅರ್ಜಿ ಕೊಡಲಿ' ಎಂದು ಹೇಳಿದರು.

‘ನಾವು ಆಗ ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ. ಯಾವುದೇ ಸಂಘಟನೆ ಅಥವಾ ಸಂಸ್ಥೆಗಳು ಬರಲಿ. ರಾಷ್ಟ್ರಭಕ್ತಿ,ರಾಷ್ಟ್ರಪ್ರೇಮ ಕಲಿಸ್ತೇವೆಂದು ಬಂದರೆ ಸ್ವಾಗತ. ಆ ಕುರಿತು ಪರಿಶೀಲನೆ ಮಾಡಿ ಅನುಮತಿ ನೀಡುತ್ತೇವೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಮಕ್ಕಳಿಗೆ ಯೋಗ ಮತ್ತು ಒಳ್ಳೆಯ ವಿಚಾರಗಳನ್ನು ಕಲಿಸುವುದರಲ್ಲಿ ತಪ್ಪೇನಿದೆ' ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News