ಚಿಕ್ಕಮಗಳೂರು: ಪ್ರಗತಿಪರ ಸಂಘಟನೆಗಳಿಂದ ಮಹಿಷ ದಸರಾ ಆಚರಣೆ

Update: 2022-10-12 14:31 GMT

ಚಿಕ್ಕಮಗಳೂರು, ಅ.13: ದಲಿತ, ಪ್ರಗತಿಪರ ಸಂಘಟನೆಗಳು ಮಹಿಷಾ ದಸರಾ ಅಂಗವಾಗಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಹಿಷಾಸುರನ ಮೆರವಣಿಗೆ ಸಂದರ್ಭ ಪೊಲೀಸರು ಹಾಗೂ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. 

ಸಂಘಟನೆಗಳ ಮುಖಂಡರು ನಗರದ ಪ್ರಮುಖ ರಸ್ತೆಗಳಲ್ಲಿ ಮಹಿಷನ ಮೆರವಣಿಗೆ ನಡೆಸಲು ಉದ್ದೇಸಿಸಿದ್ದರು. ಆದರೆ ಪೊಲೀಸರು ಇದಕ್ಕೆ ಅನುಮತಿ ನೀಡಿರಲಿಲ್ಲ. ಆದರೂ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಬಾರೀ ಸಂಖ್ಯೆಯಲ್ಲಿ ಸೇರಿದ್ದ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮೆರವಣಿಗೆ ನಡೆಸಲು ಅನುಮತಿ ನೀಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಮೆರವಣಿಗೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು. ಈ ವೇಳೆ ಪೊಲೀಸರು ಹಾಗೂ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. 

ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ತೊಗರಿಹಂಕಲ್ ವೃತ್ತದ ಬಳಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ವಾಹನಗಳನ್ನು ನಿಲ್ಲಿಸಿಕೊಂಡಿದ್ದ ಪೊಲೀಸರು ಪೊಲೀಸ್ ಇಲಾಖೆ ಆದೇಶ ಉಲ್ಲಂಘಿಸಿದಲ್ಲಿ ಬಂಧಿಸುವ ಎಚ್ಚರಿಕೆಯನ್ನೂ ನೀಡಿದರು. ಬಳಿಕ ಮುಖಂಡರು, ಪೊಲೀಸರ ನಡುವೆ ನಡೆದ ಮಾತುಕತೆಯಲ್ಲಿ ಬಸ್ ನಿಲ್ದಾಣದ ಆವರಣದಿಂದ ತೊಗರಿಹಂಕಲ್ ವೃತ್ತದವರೆಗೆ ಮಾತ್ರ ಮೆರವಣಿಗೆಗೆ ಅವಕಾಶ ಕಲ್ಪಿಸಲಾಯಿತು. 

ನಂತರ ಮುಖಂಡರು, ಕಾರ್ಯಕರ್ತರು ಮಹಿಷಾಸುರನಿಗೆ ಜಯಕಾರ ಕೂಗುತ್ತ ಪೊಲೀಸರ ಸೂಚನೆಯಂತೆ ಮೆರವಣಿಗೆ ನಡೆಸಿ, ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಹೊನ್ನೇಶ್, ಸಂತೋಷ್, ವಿಜಯ್‍ಕುಮಾರ್, ಅಂಗಡಿಚಂದ್ರು, ರಮೇಶ್ ಕೂದುವಳ್ಳಿ ಮತ್ತಿತರರು ಕಾರ್ಯಕ್ರಮದ ನೇತೃತ್ವವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News