ಒಡೆದು ಆಳುವ ನೀತಿಯ ವಿರುದ್ಧ `ಭಾರತ್ ಜೋಡೊ ಯಾತ್ರೆ'ಗೆ ಬೆಂಬಲ ನೀಡುವುದು ಅನಿವಾರ್ಯ: ನಿರಂಜನಾರಾಧ್ಯ ವಿ.ಪಿ.

Update: 2022-10-12 14:57 GMT

ಬೆಂಗಳೂರು, ಅ. 12: `ಸಂಕಷ್ಟದ ಸ್ಥಿತಿಯಲ್ಲಿ ಒಡೆದಾಳುವ ನೀತಿಯ ವಿರುದ್ಧ ಭಾರತದ ಸಮಗ್ರತೆ ಐಕ್ಯತೆಗಾಗಿ `ಭಾರತ್ ಜೋಡೋ ಯಾತ್ರೆ'ಗೆ ಬೆಂಬಲ ನೀಡುವುದು ಅನಿವಾರ್ಯ' ಎಂದು ಶಿಕ್ಞಣ ತಜ್ಞ ನಿರಂಜನಾರಾಧ್ಯ ವಿ. ಪಿ. ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, `ಭಾರತ್ ಜೋಡೋ ಯಾತ್ರೆಗೆ ಬೆಂಬಲಿಸಿ ಸಂವಿಧಾನದಲ್ಲಿ ನಂಬಿಕೆಯಿರುವ ವಿದ್ಯಾರ್ಥಿ, ಯುವಜನರು, ಮಹಿಳೆಯರು, ಚಿಂತಕರು, ರೈತರು, ಹೀಗೆ ಹತ್ತು ಹಲವು ರಂಗದ  ಪ್ರಜ್ಞಾವಂತ ನಾಗರೀಕರು ಜೊತೆಗೆ ಬಂದಿರುವುದು ದೇಶದಲ್ಲಿ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಒಂದು ಉತ್ತಮ ಬೆಳವಣಿಗೆಯಾಗಿದೆ' ಎಂದು ತಿಳಿಸಿದ್ದಾರೆ. 

`ಒಂದು ರಾಷ್ಟ್ರೀಯ ಪಕ್ಷದ ಮುಖಂಡರು ಈ ಯಾತ್ರೆಯ ನಾಯಕತ್ವವನ್ನು ವಹಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಅದನ್ನು ಪಕ್ಷ ರಾಜಕಾರಣದ ಮತಬ್ಯಾಂಕ್ ರಾಜಕಾರಣದ ನೆಲೆಯಿಂದ ನೋಡುವುದಾಗಲಿ  ಅಥವಾ ಇಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕøತಿಕ ಸಂದರ್ಭದಲ್ಲಿ ಈ ಹಿಂದೆ ನಡೆದ ಯಾತ್ರೆಗಳಿಗೆ ಹೋಲಿಸಿ ಸಂಕುಚಿತ ನೆಲೆಯಲ್ಲಿ ರಾಜಕೀಯಗೊಳಿಸುವುದು ಸರಿಯಲ್ಲ' ಎಂದು ಅವರು ತಿಳಿಸಿದ್ದಾರೆ.

`ದೇಶದಲ್ಲಿ ಇಂದು ಕೋಮುವಾದ, ದ್ವೇಷ, ವಿಷಬೀಜ ಬಿತ್ತುವ ಮೂಲಕ ಶಾಂತಿಯುತ ಸಹಬಾಳ್ವೆ, ಸಾಮರಸ್ಯ, ಭಾತೃತ್ವ, ಬಹುಸಂಸ್ಕøತಿ, ಸರ್ವಧರ್ಮ ಸಹಿಷ್ಣುತೇ, ಮುಂತಾದ ಮೂಲ  ಸಂವಿಧಾನ ಮೌಲ್ಯಗಳು ಕಾಣೆಯಾಗಿ ಕೋಮುವಾದ ಜಾತಿವಾದ ಅಟ್ಟಹಾಸ  ಮೆರೆಯುತ್ತಿದೆ. ಅಸಮಾನತೆಯಿಂದ ಕೂಡಿದ ಶಿಕ್ಷಣ ವ್ಯವಸ್ಥೆ, ನಿರುದ್ಯೋಗ, ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಂವಿಧಾನವನ್ನೇ ಬುಡಮೇಲು ಮಾಡುವ ಕೃತ್ಯಗಳು ನಡೆಯುತ್ತಿವೆ' ಎಂದು ಅವರು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News