ಭೂತಾನ್‌ನಿಂದ ಹಸಿ ಅಡಿಕೆ ಆಮದು: ಕೇಂದ್ರ ಸರಕಾರದ ನಿರ್ಧಾರಕ್ಕೆ ಬಿಜೆಪಿ ಶಾಸಕ ಹಾಲಪ್ಪ ವಿರೋಧ

Update: 2022-10-12 16:07 GMT

ಸಾಗರ, ಅ.12: ಭೂತಾನ್ ದೇಶದೊಂದ ಹಸಿ ಅಡಿಕೆ ಆಮದು ಮಾಡುವ ಕೇಂದ್ರ ಸರಕಾರದ ನಿರ್ಧಾರಕ್ಕೆ ನನ್ನ ವಿರೋಧವಿದೆ. ಯಾವುದೇ ಕಾರಣಕ್ಕೂ ನಮ್ಮ ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ನಿರ್ಧಾರ ಕೇಂದ್ರ ಸರಕಾರ ತೆಗೆದುಕೊಳ್ಳಬಾರದು ಎಂದು ಶಾಸಕ ಹಾಲಪ್ಪ ಒತ್ತಾಯಿಸಿದ್ದಾರೆ.

ತಾಲೂಕಿನ ಬಂದಗದ್ದೆಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾಗಿರುವ ಬಸ್ ನಿಲ್ದಾಣವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂತಹ ಊಹಾಪೋಹದ ಚರ್ಚೆಯಿಂದ ಅಡಿಕೆ ಬೆಲೆ ಕುಸಿಯುವ ಸಾಧ್ಯತೆ ಇದೆ ಎಂದರು.

ಭೂತಾನ್‌ನಿಂದ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಭೂತಾನ್‌ನಿಂದ ಹಸಿ ಅಡಿಕೆ ಆಮದು ಮಾಡಿಕೊಂಡರೆ ದೇಶೀಯ ಅಡಿಕೆ ಧಾರಣೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಪ್ರಸಕ್ತ ಕೇಂದ್ರ ಸರಕಾರವು ಭೂತಾನ್ ದೇಶದ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕೆಲವು ಸಹಕಾರ ನೀಡುತ್ತಿದೆ. ಅದರಲ್ಲಿ ಅಡಿಕೆ ಖರೀದಿಯೂ ಸೇರಿದೆ ಎನ್ನಲಾಗುತ್ತಿದೆ. ಈಗಾಗಲೆ ಪೆಟ್ರೋಲ್ ರಿಯಾಯಿತಿ ದರದಲ್ಲಿ ಕೇಂದ್ರ ಸರಕಾರ ಭೂತಾನ್ ದೇಶಕ್ಕೆ ನೀಡುತ್ತಿದೆ. ಇನ್ನು ಕೆಲವು ಸಹಕಾರವನ್ನು ಆ ದೇಶಕ್ಕೆ ನೀಡಲು ನಮ್ಮ ಅಭ್ಯಂತರವಿಲ್ಲ. ಯಾವುದೇ ಕಾರಣಕ್ಕೂ ಅಡಿಕೆಯನ್ನು ಆಮದು ಮಾಡಿಕೊಳ್ಳುವುದು ಬೇಡ ಎಂದರು.

ಸಾರ್ಕ್ ಒಪ್ಪಂದದ ಅಡಿ ಇಂತಹ ಸಣ್ಣಪುಟ್ಟ ವಹಿವಾಟುಗಳು ದೇಶಗಳ ನಡುವೆ ನಡೆಯುತ್ತಿದೆ. ಆಮದು ತಡೆಯಲು ಸಾಧ್ಯವಿಲ್ಲ. ಸರಕಾರ ಆಮದು ತಡೆಗಟ್ಟುವ ನಿಟ್ಟಿನಲ್ಲಿ ಆಮದು ಶುಲ್ಕ ಹೆಚ್ಚಿಸುವ ಮೂಲಕ ಅಡಿಕೆ ಒಳಗೆ ಬರದಂತೆ ನೋಡಿಕೊಳ್ಳಬೇಕು. ಇದರ ಜೊತೆಗೆ ಅರಬ್‌ನ ಕೆಲವು ದೇಶಗಳಿಂದಲೂ ಅಡಿಕೆ ಕಾಳಸಂತೆಯಲ್ಲಿ ಭಾರತ ಪ್ರವೇಶ ಮಾಡುತ್ತಿದೆ ಎನ್ನುವ ದೂರು ಇದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೇಂದ್ರ ಸರಕಾರಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಒಳಗೊಂಡ ನೇತೃತ್ವದ ನಿಯೋಗದ ಜೊತೆ ತೆರಳಿ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳದಂತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಹಾಲಪ್ಪ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆಳದಿ ಗ್ರಾಪಂ ಅಧ್ಯಕ್ಷೆ ಗೀತಾ ರಮೇಶ್, ಪ್ರಮುಖರಾದ ರಮೇಶ್ ಹಾರೆಗೊಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಶೃತಿ ರಮೇಶ್, ದುರ್ಗಪ್ಪ, ಸುಮಾ, ಉಮೇಶ್ ಬಂದಗದ್ದೆ, ಮಹಾಬಲಗಿರಿ, ಬಂಗಾರಪ್ಪ ಪಡವಗೋಡು, ಶೈಲೇಂದ್ರ, ಪಿಡಿಒ ಅ್ಫಾಕ್ ಅಹ್ಮದ್ ಹಾಗೂ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News