ಮಂಡ್ಯ | ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಕುಟುಂಬಸ್ಥರ ಆಕ್ರಂದನ ನಡುವೆ ಅಂತ್ಯಸಂಸ್ಕಾರ

Update: 2022-10-12 17:19 GMT

ಮಂಡ್ಯ/ಮಳವಳ್ಳಿ, ಅ.12: ರಾಜ್ಯವೇ ಬೆಚ್ಚಿ ಬೀಳಿಸುವಂತಹ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಬುಧವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಬಳಿಕ ಬಾಲಕಿಯ ಅಂತ್ಯಕ್ರಿಯೆ ಕುಟುಂಬದವರ ಆಕ್ರಂದನ ಹಾಗೂ ಸಾರ್ವಜನಿಕರ ಆಕ್ರೋಶದ ನಡುವೆ ನೆರವೇರಿತು.

ಮಂಗಳವಾರ ಪಟ್ಟಣದ ಮೈಸೂರು ಮುಖ್ಯರಸ್ತೆಯ ಬದಿಯಲ್ಲಿರುವ ಜನದಟ್ಟಣೆಯಿಂದ ಕೂಡಿರುವ ಬೇಕರಿಯೊಂದರ ಹಿಂಭಾಗದ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಬಾಲಕಿ ದಿವ್ಯಾ(10)  ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಮಹಜರು ನಡೆಸಿದ ನಂತರ ಮೃತದೇಹವನ್ನು ಪೊಲೀಸ್ ಭದ್ರತೆಯಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಡರಾತ್ರಿ ಸಾಗಿಸಿದ್ದರು. ಬೆಳಗಾಗುವಷ್ಟರಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಬುಧವಾರ ಬೆಳಗಿನಿಂದಲೇ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡರು.

ಘಟನೆಯನ್ನು ಖಂಡಿಸಿ ಜನಪರ ಸಂಘಟನೆಗಳ ಕಾರ್ಯಕರ್ತರು ಸೇರಿಕೊಂಡು ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ತಡೆದು ದಿವ್ಯಾ ಭಾವಚಿತ್ರವಿರುವ ಪ್ಲೆಕ್ಸ್ ಮತ್ತು ಹೋರಾಟದ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಈ ನಡುವೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಭೇಟಿನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಆರೋಪಿ ಬಂಧನಕ್ಕೆ ತನಿಖಾ ತಂಡ ರಚಿಸಲಾಗಿದೆ ಎಂದು ತಿಳಿಸಿ ತೆರಳಿದರು.

► ಆರೋಪಿಯ ಬಂಧನ?

ಬಾಲಕಿಯ ಕೊಲೆ ಪ್ರಕಟಣ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಸಂಶಾಯಸ್ಪದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆಂದು ನಂಬಲರ್ಹ ಮೂಲಗಳಿಂದ ಮಾಹಿತಿ ವಾರ್ತಾಭಾರತಿಗೆ ಲಭ್ಯವಾಗಿದೆ. ಆದರೆ, ಪ್ರಕರಣದ ಗಂಭೀರ ಸ್ವರೂಪವನ್ನು ಅರಿತ ಪೊಲೀಸರು ಜನರ ಉದ್ವಿಗ್ನತೆ ತಗ್ಗುವವರೆಗೂ ಆರೋಪಿ ಬಂಧನದ ವಿಷಯ ಬಹಿರಂಗಪಡಿಸುವುದು ಬೇಡವೆಂದು ಗೌಪ್ಯ್ಥಳದಲ್ಲಿರಿಸಿದ್ದಾರೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News