ಹಿಜಾಬ್ ಪ್ರಕರಣ: ಸರಕಾರದ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದ ಸಚಿವ ಆರ್.ಅಶೋಕ್

Update: 2022-10-13 12:22 GMT
ಸಚಿವ ಆರ್.ಅಶೋಕ್

ಬೆಂಗಳೂರು: ‘ಹಿಜಾಬ್ ವಿಚಾರವಾಗಿ ಸುಪ್ರೀಂ ಕೋರ್ಟ್ ಭಿನ್ನ ಆದೇಶ ನೀಡಿದ್ದರೂ ರಾಜ್ಯ ಸರಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಶಾಲೆಗಳಲ್ಲಿ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು' ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸರಕಾರದ ಆದೇಶದ ವಿರುದ್ಧ ಕೆಲ ವಿದ್ಯಾರ್ಥಿಗಳು ಕೋರ್ಟ್‍ಗೆ ಹೋಗಿದ್ದರು. ಹೈಕೋರ್ಟ್ ಸರಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಇದೀಗ ಸುಪ್ರೀಂ ಕೋರ್ಟ್‍ನಲ್ಲಿಯೂ ಭಿನ್ನ ತೀರ್ಪು ಬಂದಿದೆ. ಮುಖ್ಯ ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆ ಮಾಡಿದ್ದು, ಸರಕಾರದ ನಿಲುವಿನಲ್ಲಿ ಬದಲಾವಣೆ ಇಲ್ಲ' ಎಂದು ಸ್ಪಷ್ಟಪಡಿಸಿದರು.

‘ವಿದ್ಯಾರ್ಥಿಗಳು ಮನೆಯಲ್ಲಿ ಏನು ಬೇಕಾದರೂ ವಸ್ತ್ರ ಧರಿಸಲಿ. ಆದರೆ, ಶಾಲೆಯಲ್ಲಿ ಬರುವಾಗ ಮಾತ್ರ ಸಮವಸ್ತ್ರ ಕಡ್ಡಾಯ. ಖಾಸಗಿ ಶಾಲೆಗಳಲ್ಲಿ ಸಮವಸ್ತ್ರ ಸಂಹಿತೆ ಇದೆ. ಅದರ ಪಾಲನೆ ನಡೆಯುತ್ತಿದೆ. ಇರಾನ್‍ನಲ್ಲಿ ಏನು ನಡೆಯುತ್ತಿದೆ ಎಂಬುದು ಗಮನಾರ್ಹ. ಅಲ್ಲಿ ಮಹಿಳೆಯರು ಹಿಜಾಬ್ ಕಿತ್ತು ಬಿಸಾಡುತ್ತಿದ್ದಾರೆ' ಎಂದು ಅವರು ಹೇಳಿದರು

ಬಿಎಸ್‍ವೈ ಪಾದಯಾತ್ರೆ ಮಾಡಿದ್ದಾರೆ: ‘ಪಾದಯಾತ್ರೆ ಬಿಎಸ್‍ವೈ ಅವರ ರಕ್ತದ ಕಣ ಕಣದಲ್ಲೂ ಬಂದಿದೆ. ಬಿಜೆಪಿಯೂ ಪಾದಯಾತ್ರೆ ನಡೆಸಿದೆ. ಯಡಿಯೂರಪ್ಪನವರು 50 ವರ್ಷ ಪಾದಯಾತ್ರೆ ಮಾಡಿದ್ದಾರೆ. ಜನರು ಮಾತಾಡೋದನ್ನು ಯಡಿಯೂರಪ್ಪನವರು ಹೇಳಿದ್ದಾರೆ. ಪಾದಯಾತ್ರೆಗೆ ಒಂದು ಗಾಂಭೀರ್ಯತೆ ಇರಬೇಕು. ಓಡೋದು, ಬಸ್ಕಿ ಹೊಡಿಸೋದು ಈ ರೀತಿ ಪಾದಯಾತ್ರೆ ಮಾಡುತ್ತಿದ್ದಾರೆ' ಎಂದು ಅವರು ಟೀಕಿಸಿದರು.

‘ಕಾಂಗ್ರೆಸ್ ಒಂದು ಕುಟುಂಬದ ಪಕ್ಷ. ರಾಹುಲ್ ಗಾಂಧಿ ನೋಡೋದಕ್ಕೆ ಸೋನಿಯಾ ಗಾಂಧಿ ಓಡೋಡಿ ಬಂದಿದ್ದಾರೆ. ಮಗನ ಮೇಲೆ ಪ್ರೀತಿಗೆ ಬಂದಿದ್ದಾರೆ. ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದರು. ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಆಗ ಸೋನಿಯಾ ಗಾಂಧಿ ಬಂದಿರಲಿಲ್ಲ. ಸಿಎಂ ಹಾಗೂ ಬಿಎಸ್‍ವೈ, ಸಿದ್ದರಾಮಯ್ಯರಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News