ಪರಿಶಿಷ್ಟರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ‘ವೇದ ಗಣಿತ' ತರಬೇತಿ: ಪತ್ರ ಹಿಂಪಡೆದ ರಾಜ್ಯ ಸರಕಾರ
ಬೆಂಗಳೂರು: ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಎಸ್‍ಸಿ-ಎಸ್‍ಟಿ ಅನುದಾನದಲ್ಲಿ 5ರಿಂದ 8ನೆ ತರಗತಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಹಿತ ವೇದಗಣಿತ ತರಬೇತಿ ನೀಡುವ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಎಂ.ಎಂ.ರಾಜು ತಿಳಿಸಿದ್ದಾರೆ.
ಐದರಿಂದ ಎಂಟನೆ ತರಗತಿ ವಿದ್ಯಾರ್ಥಿಗಳಿಗೆ ವೇದ ಗಣಿತ ತರಬೇತಿ ನೀಡಲು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಎವಿಎಂ ಅಕಾಡೆಮಿ ಇವರಿಗೆ ಅವಕಾಶ ಕಲ್ಪಿಸಲಾಗಿತ್ತು. ಸದರಿ ವಿಷಯವನ್ನು ಪುನರ್ ಪರಿಶೀಲಿಸಲಾಗಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವ ವಿಷಯಗಳ ಪಠ್ಯ ಕ್ರಮದ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೂ ನಿರ್ಧರಿಸಬೇಕಾಗಿರುತ್ತದೆ. ಆದುದರಿಂದ ಮೇಲ್ಕಂಡ ಉಲ್ಲೇಖಿತ ಪತ್ರವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಎಸ್‍ಸಿಪಿ-ಟಿಎಸ್‍ಪಿಯ ಸುಮಾರು 70 ಕೋಟಿ ರೂ. ಹಣವನ್ನು ಉಳಿಸಿದ್ದೇವೆ. ವೇದ ಗಣಿತದ ನೆಪದಲ್ಲಿ ನಾಡಿನ ಒಂದುವರೆ ಲಕ್ಷ ಮುಗ್ದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಅನರ್ಥ ವೇದೀಕರಣಗೊಳ್ಳುವುದನ್ನು ತಪ್ಪಿಸಿದ್ದೇವೆ. ಪರಿಶಿಷ್ಟರ ಹಣವನ್ನು ದುರ್ಬಳಕೆಗೆ ಮುಂದಾಗಿ ಏಕಾಏಕಿ ಸುತ್ತೋಲೆ ಕಳುಹಿಸಿದ ಸರಕಾರದ ಅಧಿಕಾರಿಗಳು ಮತ್ತು ನಮ್ಮ ಹಣವನ್ನು ಅನೀತಿ ಹಾಗು ಅನ್ಯಾಯವಾಗಿ ಕಬಳಿಸಲು ಸಜ್ಜಾಗಿದ್ದ ಎವಿಎಂ ಎಂಬ ಮನುವಾದಿ ಖಾಸಗಿ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಬೇಕು'
-ಹ.ರಾ.ಮಹೇಶ್, ಚಿಂತಕ