ತಾಕೇರಿ ತಲುಪಿದ ಯೋಧ ನಾಪಂಡ ಸಿ.ಮಹೇಶ್ ಪಾರ್ಥಿವ ಶರೀರ

Update: 2022-10-13 17:55 GMT

ಮಡಿಕೇರಿ: ಉತ್ತರಾಖಂಡ್ ನ ಜೋಷಿಮತ್ತ್ ಎಂಬಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಗ್ರಾಮದ ನಾಪಂಡ ಸಿ.ಮಹೇಶ್(44) ಅವರ ಪಾರ್ಥಿವ ಶರೀರ ಗುರುವಾರ ಸಂಜೆ ಹುಟ್ಟೂರಿಗೆ ತಲುಪಿತು.  

ಸೋಮವಾರಪೇಟೆ ಜೇಸಿ ವೇದಿಕೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಯಿತು. ಪಟ್ಟಣ ಮತ್ತು ಗ್ರಾಮೀಣ ಭಾಗದ ಜನರು ಅಂತಿಮ ದರ್ಶನ ಪಡೆದರು. 

ಶಾಸಕ ಅಪ್ಪಚ್ಚು ರಂಜನ್, ತಾಲ್ಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ಎಸ್.ವಿ.ನರಗುಂದ, ಜೈಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು. ಪತ್ನಿ ವಿನಂತಿ ಹಾಗೂ ಕುಟುಂಬಸ್ಥರು ಇದ್ದರು.

ಶುಕ್ರವಾರ ಬೆಳಗ್ಗೆ 10ರಿಂದ 2 ಗಂಟೆಯರೆಗೆ ಕಿರಗಂದೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ನಂತರ ತಾಕೇರಿ ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೃತ ಯೋಧ ಮಹೇಶ್, ಭಾರತೀಯ ಭೂ ಸೇನೆಯ ಇಎಂಇ (ಇಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕಾನಿಕಲ್ ಇಂಜಿನಿಯರ್ಸ್) ವಿಭಾಗದಲ್ಲಿ ಸುಬೇದಾರ್ ಹುದ್ದೆಯಲ್ಲಿದ್ದರು. ಕಳೆದ 26 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News