ಅ.15ರಿಂದ ಅಮೃತಜ್ಯೋತಿ ನೋಂದಣಿ ಅಭಿಯಾನ ಪ್ರಾರಂಭ: ಸಚಿವ ಸುನಿಲ್ ಕುಮಾರ್

Update: 2022-10-13 18:03 GMT

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಿಪಿಎಲ್ ಕಾರ್ಡ್‍ದಾರರಿಗೆ 75 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ‘ಅಮೃತ ಜ್ಯೋತಿ’ ಯೋಜನೆ ನೋಂದಣಿಗಾಗಿ ಅ.15ರಿಂದ 30ರವರೆಗೆ ಬೃಹತ್ ಅಭಿಯಾನ ನಡೆಸಬೇಕು ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸೂಚನೆ ನೀಡಿದ್ದಾರೆ.

ಗುರುವಾರ ನಗರದ ಬೆಸ್ಕಾಂ ಬೆಳಕು ಭವನದಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಯೋಜನೆ ಜಾರಿಗೆ ಸಂಬಂಧಪಟ್ಟಂತೆ ಇರುವ ತಾಂತ್ರಿಕ ಅಡಚಣೆ ವಿಚಾರದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದ್ಯತೆಯ ಮೇಲೆ ಮಾಡಬೇಕಾದ ಯೋಜನೆಗಳಲ್ಲಿ ವಿಪರೀತ ತಾಂತ್ರಿಕ ಅಂಶಗಳನ್ನು ತುರುಕದಂತೆ ಸಲಹೆ ನೀಡಿದರು.

ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ನೋಂದಣಿಗೆ ಹದಿನೈದು ದಿನಗಳ ಅಭಿಯಾನ ನಡೆಸುವಂತೆ ಸೂಚನೆ ನೀಡಿದ ಅವರು, ಅ.15ರಿಂದ 30 ರವರೆಗೆ ನೋಂದಣಿ ಕಾರ್ಯ ನಡೆಸಬೇಕು. ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಈಗಾಗಲೇ 2.50 ಲಕ್ಷ ಅರ್ಜಿಗಳು ಸ್ವೀಕಾರವಾಗಿದೆ. ಅಭಿಯಾನ ಮುಕ್ತಾಯಗೊಳ್ಳುವವರೆಗೆ 10 ಲಕ್ಷ ಫಲಾನುಭವಿಗಳ ನೋಂದಣಿಯಾಗಬೇಕು. ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳ ಬೃಹತ್ ಸಮಾವೇಶ ನಡೆಸುವುದಕ್ಕೆ ಇಂದಿನಿಂದಲೇ ಸಿದ್ಧತೆ ನಡೆಸಬೇಕು. ಚಿತ್ರದುರ್ಗ, ಚಾಮರಾಜನಗರ, ಬೀದರ್, ಬಾಗಲಕೋಟೆಯಲ್ಲಿ ಸಮಾವೇಶ ನಡೆಸಲಾಗುವುದು. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳುವಂತೆ ಸುನೀಲ್ ಕುಮಾರ್ ಸೂಚನೆ ನೀಡಿದರು.

ಬೆಳಕು ನಿರಂತರ: ಬೆಳಕು ಯೋಜನೆ ಅಡಿ ವಿದ್ಯುತ್ ಸಂಪರ್ಕ ನೀಡುವ ಪ್ರಕ್ರಿಯೆಯನ್ನು ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು. ನವೆಂಬರ್ 15ರೊಳಗೆ ಎಲ್ಲ ಜಿಲ್ಲೆಗಳಲ್ಲಿ ಇದುವರೆಗೆ ಬಂದ ಅರ್ಜಿಗಳಿಗೆ ಸಂಪರ್ಕ ನೀಡಬೇಕು. ಹೊಸ ಅರ್ಜಿಗಳಿಗೂ ಸಂಪರ್ಕ ಕೊಡುವಂತೆ ಅವರು ನಿರ್ದೇಶನ ನೀಡಿದರು.

ಮತ್ತೊಂದು ಅಭಿಯಾನ: ಟಿಸಿ ಹಾಗೂ ಫೀಡರ್ ನಿರ್ವಹಣೆಗಾಗಿ ಮತ್ತೆ ಅಭಿಯಾನ ನಡೆಸಬೇಕು. ಇದರಿಂದ ತಾಂತ್ರಿಕ ವೆಚ್ಚ ಕಡಿಮೆ ಮಾಡುವುದಕ್ಕೆ ಸಾಧ್ಯವಿದೆ. ಹೀಗಾಗಿ ನ.1 ರಿಂದ 15 ರವರೆಗೆ ಹಾಗೂ ಡಿ.1ರಿಂದ 15ರವರೆಗೆ ಟಿಸಿ ಹಾಗೂ ಫೀಡರ್ ನಿರ್ವಹಣಾ ಅಭಿಯಾನ ನಡೆಸುವಂತೆ ಸುನೀಲ್ ಕುಮಾರ್ ಸೂಚನೆ ನೀಡಿದರು.

ಸಭೆಯಲ್ಲಿ ಇಂಧನ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಿ.ಕುಮಾರನಾಯಕ್, ಎಲ್ಲ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ನಿರ್ದೇಶಕರು, ಮುಖ್ಯ ಎಂಜಿನಿಯರ್‍ಗಳು ಭಾಗವಹಿಸಿದ್ದರು. 

ಇ-ಗವರ್ನೆನ್ಸ್ ಕಾರ್ಯದರ್ಶಿಗೆ ಕರೆ: ಅಮೃತ ಜ್ಯೋತಿ ಅನುಷ್ಠಾನಕ್ಕೆ ಇ-ಗವರ್ನೆನ್ಸ್ ರೂಪಿಸಿರುವ ಸಾಫ್ಟ್ ವೇರ್ ನಿಂದ ತಾಂತ್ರಿಕ ಅಡಚಣೆಯುಂಟಾಗುತ್ತಿದೆ ಎಂದು ಅಧಿಕಾರಿಗಳು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಇ-ಗವರ್ನೆನ್ಸ್ ಕಾರ್ಯದರ್ಶಿ ಪೊನ್ನುರಾಜು ಅವರಿಗೆ ಕರೆ ಮಾಡಿದ ಸಚಿವ ಸುನೀಲ್ ಕುಮಾರ್ ತಕ್ಷಣ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದರು.

ಕೆಲವೇ ನಿಮಿಷಗಳಲ್ಲಿ ಸಭೆಗೆ ಆಗಮಿಸಿದ ಪೊನ್ನುರಾಜ್, ಎರಡು, ಮೂರು ಹಂತದಲ್ಲಿ ಸರಳೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಒಟಿಪಿ ಬದಲು ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಆಧರಿಸಿ ಫಲಾನುಭವಿಗಳ ಆಯ್ಕೆ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಡೆಮೊ ನಡೆಯುತ್ತಿದೆ. ಕೆಲವೇ ದಿನದಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸುತ್ತೇವೆ ಎಂದು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News