ಬಳ್ಳಾರಿ: ಕಾರ್ಮಿಕರ ಪುನರ್ವಸತಿಗೆ ಆಗ್ರಹಿಸಿ ಪಾದಯಾತ್ರೆ; ಭರವಸೆ ಬಳಿಕ ಪ್ರತಿಭಟನೆ ಕೈಬಿಟ್ಟ ಕಾರ್ಮಿಕರು

Update: 2022-10-13 18:58 GMT

ಬಳ್ಳಾರಿ: ಅ.11ರಂದು ಬೆಳೆಗ್ಗೆ ಸಂಡೂರಿನ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಪ್ರಾರಂಭವಾದ ಬಳ್ಳಾರಿ ಜಿಲ್ಲಾ ಗಣಿಕಾರ್ಮಿಕರ ಪಾದಯಾತ್ರೆಯು ಅ.13ರಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಸಮಾಪ್ತಿಗೊಂಡಿದೆ. ಸಂಡೂರಿನಿಂದ ಪ್ರಾರಂಭವಾದ ಪಾದಯಾತ್ರೆಯು ತೋರಣಗಲ್ಲು, ಕುದಿತಿನಿ, ವಣಿವಿರಪುರ, ವಡ್ಡು, ಅಲ್ಲಿಪುರ, ಮತ್ತುಇತರೆ ಹಳ್ಳಿಗಳ ಮೂಲಕ ಸುಮಾರು 70 ಕೀ.ಮೀ ರಷ್ಟು ಕ್ರಮಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿಯನ್ನು ತಲುಪಿದೆ.

ಪಾದಯಾತ್ರೆ ಮಾರ್ಗದುದ್ದಕ್ಕೂ ಗಣಿಕಾರ್ಮಿಕರ ಸಂಕಷ್ಟಗಳನ್ನು ಆಲಿಸಿ ಮತ್ತು ಸಾರ್ವಜನಿಕರಿಗೆ ಗಣಿಕಾರ್ಮಿಕರ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು. ಪಾದಯಾತ್ರೆಯನ್ನು ಮುಕ್ತಾಯಗೊಳಿಸಿದ ಬಳ್ಳಾರಿ ಜಿಲ್ಲಾ ಗಣಿಕಾರ್ಮಿಕರ ಸಂಘವು ಅಂತಿಮವಾಗಿ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಗಣಿಕಾರ್ಮಿಕರ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆಯನ್ನು ನಡೆಸಿದರು.

ಜಿಲ್ಲಾಧಿಕಾರಿಯವರ ನಿಯೋಜನೆ ಮೇರೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎ.ಸಿ. ಆಕಾಶ್‍ ಪ್ರತಿಭಟನಾ ನಿರತಕಾರ್ಮಿಕರ ಹಕ್ಕೋತ್ತಾಯಗಳು ಮತ್ತು ಗಣಿಕಾರ್ಮಿಕರ ಪುನರ್ವಸತಿಗೆ ಕಾರ್ಮಿಕ ಸಂಘಟನೆ ತಯಾರಿಸಿರುವ ಪ್ರಸ್ತಾವನೆಯನ್ನು ಸ್ವೀಕರಿಸಿದರು.

ನಂತರ ಆಕಾಶ್‍ ಅವರು ಸಂಘಟನೆ ನೀಡಿರುವ ಎಲ್ಲಾ ಹಕ್ಕೋತ್ತಾಯಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಕಾರ್ಮಿಕರ ಹಕ್ಕೋತ್ತಾಯಗಳನ್ನು ಈಡೇರಿಸಲು ಕಾರ್ಮಿಕ ಸಂಘಟನೆ ನೀಡಿರುವ ಪ್ರಸ್ತಾವನೆಯ ಅನುಸರಾರ ಯೋಜನೆ ರೂಪಿಸುವುದಾಗಿ ಕಾರ್ಮಿಕರಿಗೆ ಆಶ್ವಾಸನೆ ನೀಡಿದ್ದಾರೆ. ತಮ್ಮ ಆಶ್ವಾಸನೆಯನ್ನು ಜಾರಿಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಅ.19ರಂದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

ಗಣಿ ಕಾರ್ಮಿಕರ ಎಲ್ಲಾ ಹಕ್ಕೋತ್ತಾಯಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಕಾರ್ಮಿಕರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News