ಮಂಡ್ಯ | 'ಐದು ರೂ. ವೈದ್ಯ' ಖ್ಯಾತಿಯ ಡಾ.ಶಂಕರೇಗೌಡರಿಗೆ ಸಿಎನ್ಎನ್ ನ್ಯೂಸ್18ನ 'ಇಂಡಿಯನ್ ಆಫ್ ದಿ ಇಯರ್' ಪ್ರಶಸ್ತಿ

Update: 2022-10-14 06:35 GMT

ಬೆಂಗಳೂರು, ಅ.14: 'ಐದು ರೂ. ಡಾಕ್ಟರ್' ಎಂದೇ ಹೆಸರಾಗಿರುವ ಮಂಡ್ಯದ ವೈದ್ಯ ಡಾ.ಶಂಕರೇಗೌಡ ಅವರು ಸಿಎನ್ಎನ್ ನ್ಯೂಸ್18 ಸಂಸ್ಥೆ ನೀಡುವ ಈ ಬಾರಿಯ 'ಇಂಡಿಯನ್ ಆಫ್ ದಿ ಇಯರ್-2022' (Indian Of The Year) ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಡಾ.ಶಂಕರೇಗೌಡರಿಗೆ ಈ ಪ್ರಶಸ್ತಿ ಲಭಿಸಿದ್ದು, ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚವಿ ನಿತಿನ್ ಗಡ್ಕರಿ ಪ್ರಶಸ್ತಿ ಪ್ರದಾನ ಮಾಡಿದರು.

ಡಾ.ಶಂಕರೇಗೌಡರಿಗೆ ತಮ್ಮ ಕ್ಲಿನಿಕ್ ಗೆ ಬರುವ ರೋಗಿಗಳಿಗೆ ಕೇವಲ 5 ರೂ. ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ. 1982ರಿಂದಲೂ ಈ ರೀತಿ ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, '5 ರೂಪಾಯಿ ಡಾಕ್ಟರ್ ಎಂದೇ ಪ್ರಖ್ಯಾತಿಗಳಿಸಿರುವ ಮಂಡ್ಯದ ವೈದ್ಯ ಶ್ರೀ ಶಂಕರೇಗೌಡರಿಗೆ  ಸಿಎನ್ಎನ್ ನ್ಯೂಸ್18ನ  'ಇಂಡಿಯನ್ ಆಫ್ ದಿ ಇಯರ್-2022' ಪ್ರಶಸ್ತಿ ಲಭಿಸಿರುವುದು ಅತ್ಯಂತ ಅಭಿನಂದನಾರ್ಹ ಸಂಗತಿಯಾಗಿದೆ. ಗ್ರಾಮೀಣ ಭಾಗದ ಜನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದಾರೆ.

ನಮ್ಮ ಮಂಡ್ಯದ ₹5 ಡಾಕ್ಟರ್‌ ಶಂಕರೇಗೌಡ ಅವರಿಗೆ ಸಿಎನ್ಎನ್ ನ್ಯೂಸ್18ನ  'ಇಂಡಿಯನ್ ಆಫ್ ದಿ ಇಯರ್-2022'  ಪ್ರಶಸ್ತಿ ದೊರಕಿರುವುದು ಅತ್ಯಂತ ಸಂತಸದ ವಿಚಾರ. ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಈ ಪ್ರಶಸ್ತಿಗೆ ಭಾಜನರಾಗಿರುವ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತಾವು ಪಡೆದ ಜ್ಞಾನವನ್ನು ಗ್ರಾಮೀಣ ಜನರ ಸೇವೆಗೆ ಮೀಸಲಿಡುವ ಶಂಕರೇಗೌಡರ ಸಂಕಲ್ಪ ಸದಾ ಪ್ರೇರಣೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಕೂಡಾ ಅವರನ್ನು ಅಭಿನಂದಿಸಿದ್ದಾರೆ.

ತಾನು ಓದಿರುವ ಕಸ್ತೂರ್ಬಾ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿಯೇ ಶಂಕರೇಗೌಡ ಅವರು ಸಹ ತಮ್ಮ ವೈದ್ಯಕೀಯ ಶಿಕ್ಷಣ ಮುಗಿಸಿದ್ದರೆಂಬುದು ಹೆಮ್ಮೆಯ ವಿಚಾರ. 1982 ರಿಂದ ಆರಂಭಿಸಿ, ಇಂದಿನವರೆಗೂ ಕೇವಲ ರೂ.5 ಸೇವಾ ಶುಲ್ಕ ಪಡೆದು, ಜನಸಾಮಾನ್ಯರಿಗೆ ಚಿಕಿತ್ಸೆ ನೀಡುತ್ತಿರುವ ಅವರ ಸೇವಾ ಮನೋಭಾವ ಹಾಗೂ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News