ಚಿಕ್ಕಮಗಳೂರು | ಕಾರ್ಮಿಕರನ್ನು ಬಳಸಿ ಎಸ್ಟೇಟ್ ಮಾಲಕನ ಬ್ಲಾಕ್‌ಮೇಲ್: ಆರೋಪ

Update: 2022-10-14 17:40 GMT

ಚಿಕ್ಕಮಗಳೂರು, ಅ.14: 'ಕಾಫಿ ಎಸ್ಟೇಟ್ ಮಾಲಕ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಈ ಘಟನೆಯ ಹಿಂದೆ ಅನಾಮಧೇಯ ವ್ಯಕ್ತಿಗಳು ಷಡ್ಯಂತ್ರ ನಡೆಸಿರುವ ಶಂಕೆ ಇದೆ' ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಅತ್ತಿಕಟ್ಟೆ ಜಗನ್ನಾಥ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರನ್ನು ಬಳಸಿಕೊಂಡು ಎಸ್ಟೇಟ್ ಮಾಲಕನನ್ನು ಬ್ಲಾಕ್‌ಮೇಲ್ ಮಾಡುವ ಹುನ್ನಾರ ನಡೆಸಲಾಗಿದೆ ಎಂದರು.

ಕಾಫಿತೋಟದ ಮಾಲಕ ಜಗದೀಶ್ ಗೌಡ ಮತ್ತು ಅವರ ಪುತ್ರ ತಿಲಕ್ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಮಾಲಕರು ಮತ್ತು ಕಾರ್ಮಿಕರ ನಡುವೆ ಭಿನ್ನಾಭಿಪ್ರಾಯ ಇದ್ದಾಗ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಈ ಘಟನೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಶಂಕೆ ಇದೆ. ಇತ್ತೀಚೆಗೆ ಕಾರ್ಮಿಕರನ್ನು ಬಳಸಿಕೊಂಡು ಕಾಫಿ ಬೆಳೆಗಾರರನ್ನು ಸುಲಿಗೆ ಮಾಡುವ ದಂಧೆ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಹುಣಸೇಹಳ್ಳಿಯಲ್ಲಿ ನಡೆದಿರುವ ಘಟನೆ ಇದರ ಮುಂದುವರಿದ ಭಾಗವಾಗಿದೆ ಎಂದು ದೂರಿದರು.

ಕಾಫಿ ಎಸ್ಟೇಟ್ ಮಾಲಕ ಜಗದೀಶ್‌ಗೌಡ ಕಾರ್ಮಿಕರನ್ನು ಥಳಿಸಿ, ಗೃಹಬಂಧನದಲ್ಲಿ ಇರಿಸಿದ್ದರು ಎಂದು ಬಿಂಬಿಸಲಾಗಿದೆ. ಘಟನೆಗೂ ಕೆಲವು ದಿನಗಳ ಮುಂಚೆಯೇ ಮಹಿಳೆಗೆ ಗರ್ಭಪಾತವಾಗಿದ್ದು, ಗರ್ಭಪಾತದ ಘಟನೆ ಸಂಬಂಧ ಸ್ಥಳೀಯ ಆಶಾ ಕಾರ್ಯಕರ್ತೆಯರು ಅ.5ರಂದು ತಮ್ಮ ನೋಂದಣಿ ಪುಸ್ತಕದಲ್ಲಿ ದಾಖಲು ಮಾಡಿಕೊಂಡು ಆರೈಕೆಯನ್ನೂ ಮಾಡಿರುವ ದಾಖಲೆ ಇದೆ. ಆದರೆ, ಅದನ್ನು ಈ ಪ್ರಕರಣಕ್ಕೆ ಥಳಕು ಹಾಕಲಾಗಿದೆ. ಕೆಲವರು ಕಾರ್ಮಿಕರನ್ನು ತೋಟದ ಮಾಲಕರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಎಲ್ಲೆಡೆ ಹರಿದಾಡುತ್ತಿರುವ ವೀಡಿಯೊಗಳು ಪೂರ್ವಯೋಜಿತವಾಗಿ ಸೃಷ್ಟಿಸಲಾಗಿದೆ ಎಂದರು.

ಆದ್ದರಿಂದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಸತ್ಯಾಸತ್ಯತೆ ಅರಿಯಲು ಸತ್ಯಶೋಧನಾ ಸಮಿತಿ ರಚಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅತ್ತಿಕಟ್ಟೆ ಜಗನ್ನಾಥ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಆವತಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಎನ್.ಶ್ರೀಧರ್, ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಸುರೇಶ್, ಲಿಂಗಪ್ಪಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News