ಬಡವರು, ರೈತರು, ಮಹಿಳೆಯರು ಪ್ರಧಾನಿ ಮೋದಿ ಪರವಾಗಿದ್ದಾರೆ: ಅರುಣ್ ಸಿಂಗ್

Update: 2022-10-15 12:56 GMT
photo credit- twitter@bcpatilkourava

ಬೆಂಗಳೂರು, ಅ. 15: ‘ದೇಶದೆಲ್ಲೆಡೆ ಪ್ರಧಾನಿ ಮೋದಿ ಅವರ ಪರವಾದ ಅಲೆ ಇದೆ. ಪಂಚ ರಾಜ್ಯ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ಅದೇರೀತಿ ರಾಜ್ಯದಲ್ಲೂ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ' ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಹಾವೇರಿ ಜಿಲ್ಲೆಯ ಮಾಸೂರಿನಲ್ಲಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಕಾರ್ಯಗಳಿಂದಾಗಿ ಬಿಜೆಪಿ ಮತ್ತೆ 150ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರ ಪಡೆಯಲಿದೆ. ಪಂಚ ರಾಜ್ಯ ಚುನಾವಣೆಯಲ್ಲಿ ಗೋವಾ, ಮಣಿಪುರ, ಉತ್ತರಾಖಂಡ, ಉತ್ತರಪ್ರದೇಶಗಳಲ್ಲಿ ಬಿಜೆಪಿ ಅಧಿಕಾರ ಗಳಿಸಿದೆ. ಕರ್ನಾಟಕದಲ್ಲೂ ಅದೇ ಮಾದರಿಯಲ್ಲಿ ಜನರು ಬಿಜೆಪಿಗೆ ಮತ ಕೊಟ್ಟು ಗೆಲ್ಲಿಸಲಿದ್ದಾರೆ' ಎಂದು ನುಡಿದರು.

‘ಬಡವರು, ರೈತರು, ಮಹಿಳೆಯರು ಬಿಜೆಪಿ ಮತ್ತು ಮೋದಿ ಅವರ ಪರವಾಗಿದ್ದಾರೆ. ಜನಧನ್, ಕಿಸಾನ್ ಸಮ್ಮಾನ್ ಪರಿಣಾಮವಾಗಿ ರೈತರು ಮತ್ತು ಮಹಿಳೆಯರು ಬಿಜೆಪಿ ಪರವಿದ್ದಾರೆ. ಮನೆಮನೆಗೆ ನಳ್ಳಿ ನೀರು ಅಭಿಯಾನ ಯಶಸ್ವಿಯಾಗಿದೆ ಎಂದು ವಿವರಿಸಿದರು. ಉಜ್ವಲ ಯೋಜನೆ, ಶೌಚಾಲಯ ನಿರ್ಮಾಣದಂಥ ಪ್ರಮುಖ ಯೋಜನೆಗಳು ಜಾರಿಯಾಗಿವೆ' ಎಂದು ಹೇಳಿದರು. 

‘ಕಾಂಗ್ರೆಸ್ 2 ರಾಜ್ಯಗಳಲ್ಲಿ ಮಾತ್ರ ಅಧಿಕಾರ ಉಳಿಸಿಕೊಂಡಿದೆ. ಮುಂದೆ ಅಲ್ಲಿಯೂ ಅದು ಅಧಿಕಾರ ಕಳಕೊಳ್ಳಲಿದೆ. ಭಾರತ್ ಜೋಡೋ ಯಾತ್ರೆ ನಡುವೆ ಅನೇಕ ಕಾಂಗ್ರೆಸ್ಸಿಗರು ಆ ಪಕ್ಷ ತೊರೆಯುತ್ತಿದ್ದಾರೆ. ರಾಜ್ಯ-ಕೇಂದ್ರ ಸರಕಾರಗಳ ಜನಪರ ಕಾರ್ಯಗಳ ಕುರಿತು ಮಾಹಿತಿ ನೀಡಿ, ಬಿಜೆಪಿ ಪರವಾಗಿ ಜನರು ನಿಲ್ಲಲಿದ್ದಾರೆ. ಅತಿ ಹೆಚ್ಚು ಮತದೊಂದಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ' ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News