ಬಿಜೆಪಿ, ಆರೆಸ್ಸೆಸ್ ವಿಚಾರಧಾರೆಯಿಂದ ದೇಶ ವಿಭಜನೆ: ರಾಹುಲ್ ಗಾಂಧಿ

Update: 2022-10-15 13:42 GMT

ಬಳ್ಳಾರಿ, ಅ.15: ಬಿಜೆಪಿ, ಆರೆಸ್ಸೆಸ್ ದ್ವೇಷ, ಹಿಂಸಾಚಾರದ ವಿಚಾರಧಾರೆ ಹೊಂದಿವೆ. ಇವುಗಳಿಂದ ದೇಶ ವಿಭಜನೆಯಾಗುತ್ತಿದೆ. ಇದು ದೇಶಭಕ್ತಿಯಲ್ಲ, ದೇಶ ವಿರೋಧಿ ಕೆಲಸವಾಗಿದೆ. ಆದುದರಿಂದಲೆ, ನಾವು ನಮ್ಮ ಯಾತ್ರೆಗೆ ‘ಭಾರತ ಜೋಡೊ’ ಎಂದು ಹೆಸರಿಟ್ಟಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದರು.

ಶನಿವಾರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಭಾರತ ಜೋಡೊ ಯಾತ್ರೆಯ ಅಂಗವಾಗಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಯಾತ್ರೆಯಲ್ಲಿ ಬೇರೆ ಬೇರೆ ಧರ್ಮ, ಜಾತಿ, ವೃದ್ಧರು, ಯುವಕರು, ಮಕ್ಕಳು, ಮಹಿಳೆಯರು ಒಟ್ಟಾಗಿ ಸೇರಿ ಹೆಜ್ಜೆ ಹಾಕುತ್ತಿದ್ದಾರೆ. ಈ ಯಾತ್ರೆಯಲ್ಲಿ ದ್ವೇಷ, ಹಿಂಸೆ, ಕಾಣುತ್ತಿಲ್ಲ ಎಂದರು.

ಇದನ್ನೂ ಓದಿ: ಇಂದಿರಾ ಗಾಂಧಿ, ತಾಯಿ ಸೋನಿಯಾ ಗಾಂಧಿಯನ್ನು ಗೆಲ್ಲಿಸಿದ ಕರ್ನಾಟಕಕ್ಕೆ ಧನ್ಯವಾದ: ಬಳ್ಳಾರಿಯಲ್ಲಿ ರಾಹುಲ್ ಗಾಂಧಿ

ದಾರಿಯಲ್ಲಿ ಯಾರಾದರೂ ಬಿದ್ದರೆ ಉಳಿದ ಎಲ್ಲರೂ ಅವರಿಗೆ ಸಹಾಯ ಮಾಡುತ್ತಾರೆ. ಆಗ ಲಿಂಗ, ಜಾತಿ, ಧರ್ಮ, ಭಾಷೆ ಹುಡುಕುವುದಿಲ್ಲ. ಈ ವಿಚಾರಧಾರೆ ಕೇವಲ ಯಾತ್ರೆಯ ವಿಚಾರಧಾರೆಯಲ್ಲ. ಇದು ಕರ್ನಾಟಕ ಹಾಗೂ ದೇಶದ ವಿಚಾರಧಾರೆಯಾಗಿದೆ. ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಇದೇ ವಿಚಾರಧಾರೆಯನ್ನು ನಮಗೆ ತಿಳಿಸಿದ್ದರು. ಇದು ಕನ್ನಡಿಗರ ರಕ್ತದಲ್ಲಿದ್ದು, ಇದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಸಾಗುತ್ತಿದ್ದೇವೆ. 3500 ಕಿ.ಮೀ ಪ್ರಯಾಣ ಇದಾಗಿದ್ದು, ಕೇರಳ ಮಾರ್ಗವಾಗಿ, ಕರ್ನಾಟಕಕ್ಕೆ ತಲುಪಿದೆ. ಆರಂಭದಲ್ಲಿ ಇಷ್ಟು ದೂರ ಸಾಗುವುದು ಸುಲಭದ ಕೆಲಸವಲ್ಲ ಎಂದು ಭಾವಿಸಿದ್ದೆವು. ದಿನ ಕಳೆದಂತೆ ಹೆಜ್ಜೆ ಹಾಕುವುದು ಸುಲಭವಾಯಿತು ಎಂದು ಅವರು ತಿಳಿಸಿದರು. 

ಯಾತ್ರೆ ವೇಳೆ ವಿದ್ಯಾರ್ಥಿಗಳು, ಯುವಕರ ಜೊತೆ ಸಂವಾದ ನಡೆಸಿದ್ದೇನೆ. ವಿದ್ಯಾಭ್ಯಾಸ ಮುಗಿದ ನಂತರ ಅವರಿಗೆ ಉದ್ಯೋಗ ಸಿಗುವ ನಂಬಿಕೆ ಇಲ್ಲ. ದೇಶದಲ್ಲಿ 45 ವರ್ಷದ ಇತಿಹಾಸದಲ್ಲಿ ಗರಿಷ್ಠ ನಿರುದ್ಯೋಗ ಹೆಚ್ಚಾಗಿದೆ. ಪ್ರಧಾನಿ  ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಎಲ್ಲಿ ಹೋದವು ಆ ಉದ್ಯೋಗಗಳು? ಬದಲಿಗೆ ಇದ್ದ ಉದ್ಯೋಗಗಳು ನಾಶವಾಗಿವೆ ಎಂದು ರಾಹುಲ್ ಗಾಂಧಿ ಕಿಡಿಗಾರಿದರು. 

ರಾಜ್ಯದಲ್ಲಿ 2.5 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇರುವುದೇಕೆ? ನೋಟು ರದ್ದತಿ, ಜಿಎಸ್ಟಿ, ಕೋವಿಡ್ ಸಮಯದಲ್ಲಿನ ನೀತಿಯಿಂದ ದೇಶದಲ್ಲಿ 12.5 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಸೇರಬೇಕಾದರೆ 80 ಲಕ್ಷ ಲಂಚ ನೀಡಬೇಕು. ಸಹಕಾರಿ ಬ್ಯಾಂಕುಗಳು, ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ. ರಾಜ್ಯ ಸರಕಾರದಲ್ಲಿ ಏನೆ ಕೆಲಸ ಆಗಬೇಕಾದರೂ 40 ಪರ್ಸೆಂಟ್ ಕಮಿಷನ್ ನೀಡಬೇಕು ಎಂದು ರಾಹುಲ್ ಗಾಂಧಿ ಕಿಡಿಗಾರಿದರು. 

ನಿರುದ್ಯೋಗ, ದ್ವೇಷದ ಜತೆಗೆ ಬೆಲೆ ಏರಿಕೆಯಿಂದ ಬದುಕು ದುಸ್ಥರವಾಗಿದೆ. ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಅಡುಗೆ ಅನಿಲ ಸಿಲಿಂಡರ್ ದರ 400 ರೂ.ಗಳಿಂದ 1000 ರೂ.ಗಡಿ ದಾಟಿದೆ. ಇಂಧನ ತೈಲ ಬೆಲೆ ಐತಿಹಾಸಿಕ ಏರಿಕೆ ಖಂಡಿದೆ. ರೈತರು ರಸಗೊಬ್ಬರಕ್ಕೆ ಶೇ.5, ಟ್ರ್ಯಾಕ್ಟರ್‍ಗಳ ಮೇಲೆ ಶೇ.12 ಹಾಗೂ ಕೀಟನಾಶಕಗಳಿಗೆ ಶೇ.18ರಷ್ಟು ತೆರಿಗೆ ನೀಡಬೇಕಿದೆ. ರೈತರು ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಮಾಣ ಶೇ.50ರಷ್ಟು ಹೆಚ್ಚಾಗಿದೆ. ಈ ವರ್ಗದ ಜನರ ಅಭಿವೃದ್ಧಿಗೆ ಸಿಗಬೇಕಿದ್ದ ಎಂಟು ಸಾವಿರ ಕೋಟಿ ರೂ.ಗಳನ್ನು ಬೇರೆ ಕಾರ್ಯಕ್ಕೆ ವರ್ಗಾಯಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಬಿಜೆಪಿ ಸರಕಾರ ನಿರಾಕರಿಸಿತ್ತು. ಕಾಂಗ್ರೆಸ್ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಿತು. ಇದರಿಂದಾಗಿ ಈ ಭಾಗದ ಸಾವಿರಾರು ಮಂದಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಅವಕಾಶ ಸಿಕ್ಕಿದೆ, ಸಾವಿರಾರು ಕೋಟಿ ವಿಶೇಷ ಅನುದಾನ ಸಿಕ್ಕಿದೆ ಎಂದು ಅವರು ಹೇಳಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News