ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ನಡೆಯುತ್ತಿರುವ ಯಾತ್ರೆ: ಮಲ್ಲಿಕಾರ್ಜುನ ಖರ್ಗೆ

Update: 2022-10-15 15:02 GMT

ಬಳ್ಳಾರಿ, ಅ.15: ‘ಭಾರತ ಜೋಡೊ ಯಾತ್ರೆ ಕೇವಲ ಚುನಾವಣೆ ಅಥವಾ ಬೇರೆ ಲಾಭದ ಉದ್ದೇಶದಿಂದ ನಡೆಯುತ್ತಿರುವ ಯಾತ್ರೆ ಅಲ್ಲ. ದೇಶದಲ್ಲಿ ಕೋಮು ಸಾಮರಸ್ಯ ಕದಡಿ, ಧರ್ಮದ ಹೆಸರಲ್ಲಿ ಜಗಳ ಹಚ್ಚುವ ಕೆಲಸ ಬಿಜೆಪಿ, ಆರೆಸ್ಸೆಸ್ ಮಾಡುತ್ತಿದೆ. ಇದರ ವಿರುದ್ಧ ಹಾಗೂ ನಿರುದ್ಯೋಗ, ಬೆಲೆ ಏರಿಕೆ, ಹದಗೆಡುತ್ತಿರುವ ಆರ್ಥಿಕ ವ್ಯವಸ್ಥೆ ವಿರೋಧಿಸಿ ಈ ಯಾತ್ರೆ ಮಾಡಲಾಗುತ್ತಿದೆ ಎಂದು ರಾಜ್ಯಸಭೆಯ ಮಾಜಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ತಿಳಿಸಿದರು.

ಶನಿವಾರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಭಾರತ ಜೋಡೊ ಯಾತ್ರೆಯ ಅಂಗವಾಗಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಸಿಕ್ಕಿರುವುದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಂದ. ಇದರಿಂದಾಗಿ, ನಿಮ್ಮ ಮಕ್ಕಳಿಗೆ ವೈದ್ಯಕೀಯ, ಇಂಜಿನಿಯರ್ ಸೀಟು, ಉದ್ಯೋಗ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅವಕಾಶ ಸಿಗುತ್ತಿದೆ' ಎಂದರು. 

‘ಇಂದು ಭಾರತ ಜೋಡೋ ಯಾತ್ರೆ ಈಗಾಗಲೇ 1 ಸಾವಿರ ಕಿ.ಮೀ ಯಾತ್ರೆ ಸಾಗಿದೆ. ಇನ್ನು 2700 ಕಿ.ಮೀ ದೂರ ಸಾಗಲಿದ್ದಾರೆ. ಅವರ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಇದೆ. ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ನಮ್ಮ ಪಕ್ಷ ಹಾಗೂ ದೇಶ ಕಟ್ಟಲು ಶಕ್ತಿ ಸಿಗುತ್ತದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಬರುವಂತೆ ಮಾಡಬೇಕು' ಎಂದು ಖರ್ಗೆ ಹೇಳಿದರು. 

150 ಕ್ಷೇತ್ರಗಳಲ್ಲಿ ಗೆಲ್ಲಲು ಅವಕಾಶ ಸೃಷ್ಟಿ: ‘ರಾಜ್ಯದ ಜನ ಮೇಕೆದಾಟು, ಸ್ವಾತಂತ್ರ್ಯ ನಡಿಗೆ, ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲಲು ಅವಕಾಶ ಸೃಷ್ಟಿಯಾಗುತ್ತಿದೆ. ಇದು ಕೇವಲ ಪಾದಯಾತ್ರೆಯಲ್ಲ, ಆಂದೋಲನ, ಕ್ರಾಂತಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

‘ರಾಹುಲ್ ಗಾಂಧಿ ಪ್ರಧಾನಿ ಆಗಲು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಮಾಡುತ್ತಿರುವ ಯಾತ್ರೆ ಅಲ್ಲ. ಇದು ಜನರ ನೋವು ದುಃಖ ದುಮ್ಮಾನಗಳನ್ನು ನಿವಾರಿಸಿ, ದೇಶ ಒಗ್ಗೂಡಿಸಿ, ದೇಶವನ್ನು ಶಾಂತಿಯ ತೋಟವನ್ನಾಗಿಸಲು ಮಾಡುತ್ತಿರುವ ಯಾತ್ರೆ' ಎಂದು ಅವರು ಹೇಳಿದರು.

‘ರಾಹುಲ್ ಗಾಂಧಿ ಅವರೊಂದಿಗೆ ಸೋಲಿಗ ಬುಡಕಟ್ಟು ಸಮುದಾಯದವರು, ಆಕ್ಸಿಜನ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರು, ನಿರುದ್ಯೋಗಿ ಯುವಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ರೈತರು, ಕಾರ್ಮಿಕರು, ಶಿಕ್ಷಣ ತಜ್ಞರು, ದಲಿತರು, ಶೋಷಿತರು ಹೀಗೆ ಎಲ್ಲ ವರ್ಗದ ಜನ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ' ಎಂದು ಶಿವಕುಮಾರ್ ತಿಳಿಸಿದರು.

‘ಈ 40 ಪರ್ಸೆಂಟ್ ಸರಕಾರ ತೆಗೆಯಬೇಕು. ವಾಗ್ದಾನ ನಮ್ಮದು ವಿಶ್ವಾಸ ನಿಮ್ಮದು. ನಮ್ಮ ನಡೆ, ನುಡಿ ಸದಾ ಒಂದೇ ಆಗಿರುತ್ತದೆ. ನುಡಿದಂತೆ ನಡೆಯುತ್ತೇವೆ ನಮ್ಮ ಮೇಲೆ ವಿಶ್ವಾಸ, ನಂಬಿಕೆ ಇಡಿ ನಾವು ನಿಮ್ಮ ಸೇವೆ ಮಾಡಿ ಋಣ ತೀರಿಸುತ್ತೇವೆ' ಎಂದು ಶಿವಕುಮಾರ್ ತಿಳಿಸಿದರು.

ಸಮಾವೇಶದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‍ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರು, ಮಾಜಿ ಸಚಿವರು ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News