ದಾಖಲೆ ಮತಗಳೊಂದಿಗೆ ಖರ್ಗೆ ಗೆಲ್ಲಿಸಿ, ಹೊಸ ಅಧ್ಯಾಯಕ್ಕೆ ಕಾಂಗ್ರೆಸ್ ಪಕ್ಷ ನಾಂದಿಯಾಗಲಿ: ರಮೇಶ್ ಬಾಬು

Update: 2022-10-15 17:26 GMT
ರಮೇಶ್ ಬಾಬು

ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, 'ಮಲ್ಲಿಖಾರ್ಜುನ ಖರ್ಗೆ ಅವರನ್ನು ದಾಖಲೆಯ ಮತಗಳೊಂದಿಗೆ ಆಯ್ಕೆ ಮಾಡುವುದರ ಮೂಲಕ  ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಗಾಂಧಿ ಕುಟುಂಬದ ಆಶೀರ್ವಾದದೊಂದಿಗೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಹೊಸ ಅಧ್ಯಾಯಕ್ಕೆ ಅವಕಾಶ ಕಲ್ಪಿಸಬೇಕು' ಎಂದು ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಿಗೆ ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಪತ್ರದ ಮೂಲಕ ಬಹಿರಂಗ ಮನವಿ ಮಾಡಿಕೊಂಡಿದ್ದಾರೆ. 

► ರಮೇಶ್ ಬಾಬು ಅವರ ಪತ್ರದ ಪೂರ್ಣ ಪಾಠ ಹೀಗಿದೆ... 

'ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆ 17-10-2022 ರಂದು ನಡೆಯಲಿದೆ. ದೇಶದ ಸುಮಾರು ಒಂಬತ್ತು ಸಾವಿರ ಕಾಂಗ್ರೆಸ್ ಪಕ್ಷದ ಮತದಾರರು ವಿವಿಧ ರಾಜ್ಯಗಳಲ್ಲಿ ತಮ್ಮ ಮತ ಚಲಾವಣೆ ಮೂಲಕ ಐತಿಹಾಸಿಕ ಚುನಾವಣೆಗೆ ಸಾಕ್ಷಿಯಾಗಲಿದ್ದೀರಿ. ಪಕ್ಷದ ಸಂವಿಧಾನದ ಅನುಚ್ಛೇದ 18ರ ಅಡಿಯಲ್ಲಿ ಚುನಾವಣೆ ನಡೆಯಲಿದ್ದು, ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು, ಸುಮಾರು 67 ಬೂತ್ ಗಳಲ್ಲಿ ಮತ ಚಲಾಯಿಸಲು ಪಕ್ಷದ ಚುನಾವಣಾ ಅಧಿಕಾರಿಗಳು ಅವಕಾಶ ಕಲ್ಪಿಸಿರುತ್ತಾರೆ'.

'ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಇಬ್ಬರು ಹಿರಿಯ ನಾಯಕರ ನಡುವೆ ಚುನಾವಣೆ ನಡೆಯಲಿದೆ. ದೇಶದ ಪ್ರಸಕ್ತ ರಾಜಕೀಯ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದವರು ಸೈದ್ಧಾಂತಿಕ ನಿಲುವುಗಳಿಗೆ ಅನುಗುಣವಾಗಿ ಪಕ್ಷವನ್ನು ಬಲಗೊಳಿಸುವ ಮತ್ತು ದೇಶದಲ್ಲಿ ಕೋಮುವಾದಿಗಳನ್ನು ತಡೆಯುವ ಕೆಲಸವನ್ನು ಮಾಡಬೇಕಾಗಿದೆ.ಇದರ ಜೊತೆಗೆ ದೇಶದಲ್ಲಿ ಮುಂಬರುವ ವಿಧಾನ ಮಂಡಲ ಮತ್ತು ಲೋಕಸಭೆಗೆ ಪಕ್ಷವನ್ನು ಮತ್ತಷ್ಟು ಶಕ್ತಿಯುತ ಮಾಡಬೇಕಾಗಿದೆ'.

'1969 ರಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕಾರಣ ಮತ್ತು ಸಮಾಜಸೇವೆ ಪ್ರಾರಂಭ ಮಾಡಿದ  ಮಲ್ಲಿಕಾರ್ಜುನ ಖರ್ಗೆ ಅವರು, ಸಂಸದೀಯ ವ್ಯವಸ್ಥೆಯಲ್ಲಿ ಹಂತ ಹಂತವಾಗಿ ಪಕ್ಷದ ಜೊತೆಯಲ್ಲಿ ರಾಷ್ಟ್ರ ಮಟ್ಟದವರೆಗೆ ಬೆಳೆದು ಬಂದ ಹಿರಿಯ ನಾಯಕರು. ಹತ್ತು ಬಾರಿ ಶಾಸಕರಾಗಿ, ಎರಡು ಬಾರಿ ಲೋಕಸಭಾ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ ಸಂಸದೀಯ ವ್ಯವಸ್ಥೆಯನ್ನು ಶ್ರೀಮಂತಗೊಳಿಸಿದ್ದಾರೆ. ಅದೇ ರೀತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯಾಗಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪದಾಧಿಕಾರಿಯಾಗಿ ಪಕ್ಷದ ಸಿದ್ದಾಂತಕ್ಕೆ ಅನುಗುಣವಾಗಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಅವರ ಪಕ್ಷದ ಬದ್ಧತೆ, ಸಾಮಾಜಿಕ ನ್ಯಾಯದ ಒಲವು, ಸರಳ ವ್ಯಕ್ತಿತ್ವ, ಸಾಮಾಜಿಕ ಕಳಕಳಿ, ಗಾಂಧಿ ಕುಟುಂಬದ ಒಡನಾಟ  ಅತಿ ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ಇಂದಿನ ರಾಷ್ಟೀಯ ರಾಜಕಾರಣದ ವಾಸ್ತವದಲ್ಲಿ ಖರ್ಗೆ ಅವರ ಆಯ್ಕೆ ಅವಶ್ಯಕವಾಗಿದೆ'.

'ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು 17-10-2022 ರಂದು ಸೋಮವಾರ ನಡೆಯಲಿರುವ ಪಕ್ಷದ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಮಲ್ಲಿಖಾರ್ಜುನ ಖರ್ಗೆ ಅವರನ್ನು ದಾಖಲೆಯ ಮತಗಳೊಂದಿಗೆ ಆಯ್ಕೆ ಮಾಡುವುದರ ಮೂಲಕ  ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಗಾಂಧಿ ಕುಟುಂಬದ ಆಶೀರ್ವಾದದೊಂದಿಗೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಹೊಸ ಅಧ್ಯಾಯಕ್ಕೆ ಅವಕಾಶ ಕಲ್ಪಿಸಬೇಕಾಗಿ ವಿನಮ್ರವಾಗಿ ಮನವಿ ಮಾಡುತ್ತೇನೆ. ದೇಶದ  ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶದ ಕಾಂಗ್ರೆಸ್ ಪಕ್ಷದ  ಪ್ರತಿನಿಧಿಗಳು ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶ್ರೀ ಮಲ್ಲಿಖಾರ್ಜುನ ಖರ್ಗೆ ಅವರಿಗೆ ಮತ ನೀಡಲು ಕೋರುತ್ತೇನೆ' ಎಂದು ರಮೇಶ್ ಬಾಬು ಅವರು ಪತ್ರದಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News