ಬಿಡುಗಡೆಗೆ ಮುನ್ನವೇ ಸದ್ದುಮಾಡುತ್ತಿರುವ ‘ಪಾಲಾರ್’

Update: 2022-10-16 07:54 GMT

ಕರ್ನಾಟಕದಲ್ಲಿ ‘ಪಾಲಾರ್’ ಎಂಬ ಕನ್ನಡ ಸಿನೆಮಾ ಬಿಡುಗಡೆಗೆ ಮುನ್ನವೇ ಭಾರೀ ಸದ್ದುಮಾಡುತ್ತಿದೆ. ದೀನ-ದಲಿತರ ನೈಜ ಘಟನೆಗಳನ್ನು ಆಧರಿಸಿ ತೆಗೆದ ಸಿನೆಮಾ ಇದಾಗಿದ್ದು ಹಳೇ ಕೋಲಾರ ಜಿಲ್ಲೆ ಮತ್ತು ದೇವನಹಳ್ಳಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲಿನ ಗ್ರಾಮದ ರೈತರ ಕಥೆ ಎನ್ನಲಾಗುತ್ತಿದೆ. ಜೀವಾ ನವೀನ್ ನಿರ್ದೇಶನದ ಈ ಚಿತ್ರಕ್ಕೆ ಸೌನವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಯುವ ನಿರ್ಮಾಪಕಿ ಕೆ. ಆರ್. ಸೌಜನ್ಯ, ನವೀನ್ ಕುಮಾರ್ ಬಾಬು ಮತ್ತು ಸೌಂದರ್ಯ ಅವರು ಬಂಡವಾಳ ಹೂಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರ.

ಕನ್ನಡದಲ್ಲಿ ನೆಲದ ಕಥೆ ಕಡಿಮೆ, ಅದರಲ್ಲೂ ದೀನ ದಲಿತರ ನೈಜ ಘಟನೆಗಳ ಆಧರಿತ ಸಿನೆಮಾಗಳು ತುಂಬಾ ವಿರಳ. ತಮಿಳು, ತೆಲುಗು ಚಿತ್ರರಂಗದಲ್ಲಿ ದಲಿತರ ಬಗೆಗಿನ ಸಿನೆಮಾಗಳು ಈಗಾಗಲೇ ಬಂದಿವೆ. ಈ ನಿಟ್ಟಿನಲ್ಲಿ ಈ ಚಿತ್ರದ ನಿರ್ದೇಶಕ ಎಂಬಿಎ ಪದವೀಧರ ಜೀವಾ ನವೀನ್ ಕನ್ನಡದಲ್ಲೂ ‘ಜೈ ಭೀಮ್’, ‘ಅಸುರನ್’, ‘ಕರ್ನನ್’, ‘ನಾರಪ್ಪ’ರೀತಿಯ ಸಿನೆಮಾವನ್ನು ಪ್ರೇಕ್ಷಕರಿಗೆ ನೀಡುವ ನಿಟ್ಟಿನಲ್ಲಿ ಸತ್ಯ ಘಟನೆಗಳನ್ನು ಹುಡುಕುತ್ತಾ ನೈಜ ಕಥೆಗಳನ್ನು ಶೇಖರಿಸಿ ‘ಪಾಲಾರ್’ ಸಿನೆಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದು ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಕನ್ನಡ ಕೋಗಿಲೆ ಗಾಯಕಿ ಉಮಾ ವೈ.ಜಿ. ಕೋಲಾರ ಅವರು ಈ ಚಿತ್ರದ ನಾಯಕಿ. ನಾಯಕ ನಟನಾಗಿ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ತಿಲಕ್‌ರಾಜ್ ಅವರು ಬಣ್ಣ ಹಚ್ಚಿದ್ದಾರೆ, ಜೊತೆಗೆ ಈ ಸಿನೆಮಾದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಕ್ಯಾಮರಾಮನ್ ಆಗಿ ಆಸಿಫ್ ರೆಹಾನ್, ಸಂಕಲನ ವಲಿ ಕುಲಾಯಿಸ್, ರಾಜಮೌಳಿ ತಂಡದ ಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ ಅವರು ಕೈ ಜೋಡಿಸಿದ್ದು 4 ಹಾಡುಗಳನ್ನು ನೀಡಿದ್ದಾರೆ. ಸುಬ್ರಮಣ್ಯ ಆಚಾರ್ಯ ಅವರ ಸೊಗಸಾದ ಸಂಗೀತ ಚಿತ್ರಕ್ಕಿದೆ. ಶ್ವೇತಾ ದೇವನಹಳ್ಳಿ, ಸುಪ್ರೀತ್ ಪಲ್ಗುಣ, ಸುಬ್ರಮಣ್ಯ ಆಚಾರ್ಯ ಜೊತೆಗೆ ಉಮಾ ವೈ.ಜಿ. ಕೋಲಾರ ಅವರು ಈ ಚಿತ್ರದ ಗಾಯಕರು. ಚಿತ್ರದ ಟ್ರೈಲರ್ ಮತ್ತು ಹಾಡುಗಳು ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಅಲ್ಲದೆ ನವೆಂಬರ್ ತಿಂಗಳಲ್ಲಿ ಸಿನೆಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

Writer - -ಎ.ಕೆ.ಎನ್

contributor

Editor - -ಎ.ಕೆ.ಎನ್

contributor

Similar News