ನನಗೆ ಯಾರೂ ವಿರೋಧಿಗಳಿಲ್ಲ, ನನ್ನ ಕರ್ತವ್ಯ ನೋಡಿಯೇ ಬೆಂಬಲಿಸಿ: ಮಲ್ಲಿಕಾರ್ಜುನ ಖರ್ಗೆ

Update: 2022-10-16 12:50 GMT
Photo:PTI

ಬೆಂಗಳೂರು, ಅ.16: ನಾನು ಎಂದಿಗೂ ಯಾವುದೇ ಸ್ಥಾನ ಬಯಸಿರಲಿಲ್ಲ. ಪಕ್ಷ ಯಾವ ಜವಾಬ್ದಾರಿ ನೀಡುತ್ತದೆಯೋ ಅದರಂತೆ ನಡೆಯುತ್ತೇನೆ. ಹೀಗಾಗಿಯೇ ಯಾರೂ ವಿರೋಧಿಗಳಿಲ್ಲ. ನನ್ನ ಕರ್ತವ್ಯ ನೋಡಿಯೇ ಬೆಂಬಲಿಸಿ ಎಂದು ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಎಂದಿಗೂ ಯಾವುದೇ ಸ್ಥಾನ ಬಯಸಿರಲಿಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ, ಈ ಅವಕಾಶವನ್ನು ನಿರೀಕ್ಷೆ ಮಾಡಿರಲಿಲ್ಲ. 1994ರಲ್ಲಿ ರಾಜ್ಯದಲ್ಲಿ ನಮ್ಮ ಸರಕಾರ ಬಿದ್ದ ನಂತರ ವಿರೋಧ ಪಕ್ಷದ ನಾಯಕ ಆಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದರು.

ಅಲ್ಲದೆ, 2008ರಲ್ಲಿ ಶಾಸಗಾಂಗ ಪಕ್ಷದ ನಾಯಕನಾಗಿದ್ದೆ. ನಾನು ಪಕ್ಷಕ್ಕಾಗಿ ಇದ್ದೇನೆ ಹೊರತು ಬೇರೆ ವಿಚಾರಕ್ಕೆ ಅಲ್ಲ. ನನ್ನಂತಹ ಹಲವರು ಪಕ್ಷದಲ್ಲಿ ಇದ್ದಾರೆ. ಹೀಗಾಗಿ ಪಕ್ಷ ಯಾವ ಜವಾಬ್ದಾರಿ ನೀಡುತ್ತದೆಯೋ ಅದರಂತೆ ನಡೆಯುತ್ತೇನೆ. ನನಗೆ ಯಾರೂ ವಿರೋಧಿಗಳಿಲ್ಲ ಎಂದು ನುಡಿದರು.

ಇಪ್ಪತ್ತು ವರ್ಷಗಳಿಂದ ಸೋನಿಯಾ ಗಾಂಧಿ ಅವರು ಪಕ್ಷ ಸಂಘಟನೆ ಮಾಡಿ ಹಲವು ಕಾನೂನು ತಂದು ಬಡವರ ಹೊಟ್ಟೆ ತುಂಬುವ ಆಹಾರ ಭದ್ರತೆ, ಶಿಕ್ಷಣ ಹಕ್ಕು, ನರೆಗಾದಂತಹ ಯೋಜನೆ ತಂದಿದ್ದಾರೆ. ಇಂತಹ ಯೋಜನೆಗಳಿಗೆ ಬೆಂಬಲ ನೀಡಬೇಕು. ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ 6 ರಾಜ್ಯಗಳಲ್ಲಿ ಸರಕಾರ ಮಾಡಿದ್ದೆವು. ಆರ್ಥಿಕ ತಜ್ಞರೂ ಆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಲವು ಪ್ರಗತಿಪರ ಯೋಜನೆಗಳು ತಂದರು ಎಂದು ಹೇಳಿದರು.

ಖರ್ಗೆ ಅವರು ಗಾಂಧಿ ಕುಟುಂಬದ ನಿಯಂತ್ರಣದಲ್ಲಿ ಕೆಲಸ ಮಾಡುತ್ತಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ವಿಚಾರಗಳು ಇದ್ದರೆ ಅವರ ಸಲಹೆ ಪಡೆಯುತ್ತೇನೆ.ಉತ್ತಮ ಸಲಹೆ ನೀವು ಕೊಟ್ಟರೂ ಸ್ವೀಕರಿಸುತ್ತೇವೆ. ಅದು ನನ್ನ ಕರ್ತವ್ಯ. ಇಪ್ಪತ್ತು ವರ್ಷಗಳ ಅವರ ಅನುಭವ ನಾನು ಕಲಿಯಬೇಕಿದೆ ಎಂದು ಅವರು ತಿಳಿಸಿದರು.

ತಿಲಾಂಜಲಿ:ಇಂದು ದೇಶದಲ್ಲಿ ಬಿಜೆಪಿ, ಆರೆಸ್ಸೆಸ್ ಬೆಂಬಲಿತ ಸರಕಾರ ಸಂವಿಧಾನಕ್ಕೆ ತಿಲಾಂಜಲಿ ಕೊಟ್ಟಿದ್ದು, ಸಂವಿಧಾನ ರೀತಿ ನಡೆದುಕೊಳ್ಳುತ್ತಿಲ್ಲ. ಐಟಿ, ಈಡಿ ಮೂಲಕ ಚುನಾಯಿತ ಸರಕಾರ ಕೆಡವುತ್ತಿದ್ದಾರೆ. ಅವರ ಪಕ್ಷ ಸೇರಲು ಒಪ್ಪದಿದ್ದರೆ ಮೊಕದ್ದಮೆ ಮುಂದುವರಿಸುತ್ತಾರೆ ಎಂದು ಟೀಕಿಸಿದರು. 

ದೇಶದ ಆರೇಳು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರ ಕೆಡವಲಾಗಿದೆ. ದೇಶದಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಇದೆಲ್ಲವನ್ನೂ ಎದುರಿಸಲು ಕಾಂಗ್ರೆಸ್ ಶಕ್ತಿಶಾಲಿಯಾಗಬೇಕು ಎಂದು ಖರ್ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News