ಓ ಮೆಣಸೇ...

Update: 2022-10-16 18:37 GMT

ಗಾಂಧೀಜಿಯೇ ಸಾವರ್ಕರ್ ಬಗ್ಗೆ ಒಳ್ಳೆಯ ಮಾತನ್ನಾಡಿದ್ದಾರೆ - ಬಿ.ಎಲ್.ಸಂತೋಷ್, ಬಿಜೆಪಿ ರಾ.ಸಂ.ಕಾರ್ಯದರ್ಶಿ
ಹಂತಕರನ್ನೂ ಹರಸುವ ದೊಡ್ಡ ಮನಸ್ಸು ಅವರದ್ದು.

ಭಾರತ್ ಜೋಡೊ ಪಾದಯಾತ್ರೆಯಿಂದ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಆರೋಗ್ಯ ಸುಧಾರಣೆ ಮಾತ್ರ ಆಗಬಹುದು - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮೋದಿಯವರು ಇಂತಹ ಯಾತ್ರೆಗೆ ಇಳಿದಿದ್ದರೆ ವಿದೇಶಗಳ ಬಟ್ಟೆ ವ್ಯಾಪಾರಿಗಳ, ಕನ್ನಡಕ ಮಾರುವವರ ಮತ್ತು ಕ್ಯಾಮರಾ ತಯಾರಕರ ಉದ್ಧಾರ ಆಗುತ್ತಿತ್ತು.

ಇನ್ನು ಎರಡು ವರ್ಷಗಳಲ್ಲಿ ಉತ್ತರಪ್ರದೇಶದಲ್ಲಿ ಅಮೆರಿಕಕ್ಕಿಂತ ಉತ್ತಮ ರಸ್ತೆಗಳನ್ನು ಕಾಣಬಹುದು -ನಿತಿನ್ ಗಡ್ಕರಿ, ಕೇಂದ್ರ ಸಚಿವ
ಅಮೆರಿಕದ ರಸ್ತೆಗಳು ಹೇಗಿವೆ ಎಂದು ಪಾಪ ಆ ಯೂಪಿಯವರಿಗೇನು ಗೊತ್ತು! ಅವರು ಹೊಂಡಗಳ ನಡುವೆ ತೇಲಾಡುತ್ತಲೇ ನಿಮ್ಮ ಬೊಗಳೆಯನ್ನು ನಂಬಬಹುದು

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿತರೂರ್ ಜೊತೆ ನಡೆಯುತ್ತಿರುವ ಸ್ಪರ್ಧೆ ಒಂದೇ ಮನೆಯಲ್ಲಿರುವ ಅಣ್ಣ-ತಮ್ಮಂದಿರ ನಡುವಿನ ಕೌಟುಂಬಿಕ ಕದನ ಅಷ್ಟೇ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಮಹಾಭಾರತ ಕೂಡಾ ಎರಡು ಕೋಮಿನವರ ನಡುವೆ ನಡೆದಿರಲಿಲ್ಲ.

ಮೀಸಲಾತಿ ಪ್ರಮಾಣ ಹೆಚ್ಚಿಸುವ ನಿರ್ಣಯ ಕೈಗೊಂಡ ಸಿಎಂ ಮತ್ತು ರಾಜ್ಯ ಸರಕಾರಕ್ಕೆ ಜೀವ ಇರುವ ತನಕ ಗುಲಾಮರಾಗಿ ಇರುತ್ತೇವೆ -ರಾಜುಗೌಡ, ಶಾಸಕ
ಮೂಲತಃ ಮೀಸಲಾತಿ ವ್ಯವಸ್ಥೆಯ ಉದ್ದೇಶ ಗುಲಾಮಗಿರಿಯಲ್ಲಿದ್ದವರನ್ನು ಅದರಿಂದ ಹೊರ ತರುವುದಾಗಿತ್ತು.

ಹಿಂದುಳಿದವರ ಉನ್ನತಿಗೆ ನಮ್ಮ ಮಾನಸಿಕತೆಯಲ್ಲಿ ಬದಲಾವಣೆಯಾಗಬೇಕು - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಮನುತ್ವವನ್ನು ಧಿಕ್ಕರಿಸಿ ಬಹುತ್ವವನ್ನು ಸ್ವೀಕರಿಸಿದರೆ ಸಾಕು.

ಬಿಜೆಪಿಯ ಕೆಲವು ನಾಯಕರು, ಕಾರ್ಯಕರ್ತರು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಬೇಕೆಂದು ಬಯಸುತ್ತಿದ್ದಾರೆ -ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಬಹುಶಃ ಆರೆಸ್ಸೆಸ್‌ನವರಂತೆ, ಅವರು ಕೂಡಾ ನಿಮ್ಮಲ್ಲಿ ಹೊಸ ಮೋದಿಯನ್ನು ಕಾಣುತ್ತಿದ್ದಾರೆ.

ಮೀಸಲಾತಿ ಪ್ರಮಾಣ ಏರಿಕೆ ರಾಜ್ಯ ಸರಕಾರದ ದಿಟ್ಟತನದ ನಿರ್ಧಾರ - ರಘುಪತಿ ಭಟ್, ಶಾಸಕ
ಲಂಚ ಮತ್ತು ಕಮಿಷನ್ ಪರ್ಸಂಟೇಜ್ ಅನ್ನು ಶೇ.40 ಕ್ಕೇರಿಸಿದವರು ಯಾವುದಾದರೂ ವರ್ಗಕ್ಕೆ ಮೀಸಲಾತಿಯನ್ನು ಆ ಮಟ್ಟಿಗೆ ಏರಿಸಿದ್ದಾರೆಯೇ?

ಬಿಜೆಪಿ ಸರಕಾರವು ರೈಲಿನ ಹಳೆಯ ಡಬ್ಬಕ್ಕೆ ಬಣ್ಣ ಬಳಿದು ಅದಕ್ಕೆ ಒಡೆಯರ್ ಎಂದು ನಾಮಕರಣ ಮಾಡಿ ಒಡೆಯರ್ ಮನೆತನಕ್ಕೆ ಅವಮಾನ ಮಾಡಿದೆ - ಯು.ಟಿ. ಖಾದರ್, ಮಾಜಿ ಸಚಿವ
ಅದು ಅಷ್ಟೊಂದು ಅಪಮಾನಕಾರಿ ಕೃತ್ಯವೆಂದು ಅವರಿಗೆ ಮನವರಿಕೆಯಾದರೆ ಅವರು ಗುಜರಿ ರೈಲುಗಳಿಗೆಲ್ಲಾ ಗಾಂಧಿ ಮತ್ತು ನೆಹರೂ ಎಂದು ನಾಮಕರಣ ಮಾಡುವ ಸಾಧ್ಯತೆ ಇದೆ.

ಗುಜರಾತ್ ಜನತೆ ನನ್ನ ಜಾತಿ, ರಾಜಕೀಯ ಹಿನ್ನೆಲೆ ನೋಡದೆ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ - ನರೇಂದ್ರ ಮೋದಿ, ಪ್ರಧಾನಿ
ಅದಕ್ಕಾಗಿ ಅವರು ಭಾರೀ ಬೆಲೆಯನ್ನೂ ತೆತ್ತಿದ್ದಾರೆ. ಅದು ಪ್ರಜಾಸತ್ತೆಯಲ್ಲಿನ ಮುಗ್ಧ ಮತದಾರರ ದೌರ್ಭಾಗ್ಯ .

ಜಮ್ಮು - ಕಾಶ್ಮೀರವು ದಶಕಗಳಿಂದಲೂ ಭೀತಿವಾದದ ನೋವನ್ನು ಅನುಭವಿಸಿದೆ ಮತ್ತು ಅದು ಈಗಲೂ ಮುಂದುವರಿದಿದೆ -ಅರಿಂದಮ್ ಬಾಗ್ಚಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ
ಆರ್ಟಿಕಲ್ 370ಯನ್ನು ರದ್ದುಗೊಳಿಸಿದರೆ ಎಲ್ಲವೂ ಸರಿಯಾಗಿ ಬಿಡುತ್ತದೆಂಬ ನಿಮ್ಮ ಸುಳ್ಳನ್ನು ನಂಬಿದ್ದವರು ತಮ್ಮ ಮೂರ್ಖತನಕ್ಕೆ ಚಿಕಿತ್ಸೆ ಮಾಡಿಕೊಳ್ಳಲಿ.

ಬಾರ್‌ನಲ್ಲಿ ಕುಡಿದು ಅಮಲೇರಿಸಿಕೊಂಡವರನ್ನು ಮನೆಗೆ ತಲುಪಿಸುವ ಜವಾಬ್ದಾರಿ ಆ ಬಾರ್‌ನವರದ್ದೆ ಎಂಬ ನಿಯಮ ಜಾರಿಗೆ ತರಲಾಗುವುದು - ವೌವಿನ್ ಗೊಡಿನ್ಹೋ, ಗೋವಾ ಸಚಿವ
ಆ ಕುಡುಕರ ಮನೆಯವರು ಹಸಿದು ಬಿದ್ದಿದ್ದರೆ ಅವರಿಗೆ ಉಣ ಬಡಿಸುವ ಹೊಣೆಯನ್ನೂ ಬಾರ್‌ನವರಿಗೆ ವಹಿಸಿ ಬಿಡಿ.

ಬೋಧಕೇತರ ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆಗೆ ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ - ಬಿ.ಸಿ.ನಾಗೇಶ್, ಸಚಿವ
ಸುಮ್ಮನೆ ಗೊಂದಲವೇಕೆ? ಹೊಸ ರೇಟ್ ಕಾರ್ಡ್ ಅನ್ನು ಬಹಿರಂಗಗೊಳಿಸಿ.

ಕನ್ನಡವನ್ನು ಸೂಕ್ತವಾಗಿ ಬಳಸುವ ನಿಟ್ಟಿನಲ್ಲಿ ಮಸೂದೆ ತರಲಾಗಿದೆ - ಜೆ.ಸಿ.ಮಾಧುಸ್ವಾಮಿ, ಸಚಿವ
ನೀವು ಕನ್ನಡ ಬಲ್ಲವರಿಂದ ಒಂದಿಷ್ಟು ಟ್ಯೂಶನ್ ಪಡೆದರೆ ಅದು, ಮಸೂದೆಗಿಂತ ಹೆಚ್ಚು ಪರಿಣಾಮಕಾರಿಯಾಗಬಹುದು.

ಇಡೀ ಪ್ರಪಂಚವೇ ಪ್ರಧಾನಿ ಮೋದಿಯವರನ್ನು ಅಚ್ಚರಿಯಿಂದ ನೋಡುತ್ತಿದೆ - ಯಡಿಯೂರಪ್ಪ, ಮಾಜಿ ಸಿಎಂ
ಎರಡು ಕಾಲಿನ ಪ್ರಾಣಿ ಯಾಕೆ ಈರೀತಿ ವರ್ತಿಸುತ್ತಿದೆ ಎಂಬುದನ್ನು ಅರಿಯುವ ಕುತೂಹಲವಿರಬಹುದು.

ಉದ್ದೇಶಪೂರ್ವಕವಾಗಿಯೇ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಲಾಗಿದೆ - ಪ್ರತಾಪಸಿಂಹ, ಸಂಸದ
ದುರುದ್ದೇಶಪೂರ್ವಕ ಎಂದರೆ ಇನ್ನಷ್ಟು ಅರ್ಥ ಪೂರ್ಣ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತೈಲ ದರವು ಗರಿಷ್ಠ ಮಟ್ಟದಲ್ಲಿರುವುದು ರಾಷ್ಟ್ರದ ಆರ್ಥಿಕತೆಗೆ ಸವಾಲನ್ನು ಸೃಷ್ಟಿಸಿದೆ -ನಿರ್ಮಲಾ ಸೀತಾರಾಮನ್, ಸಚಿವೆ
ಸವಾಲು ನಿಭಾಯಿಸಲು ಪ್ರಜೆಗಳ ಮೇಲೆ ಹೊಸ ತೆರಿಗೆ ಹೇರುವ ಉದ್ದೇಶ ಇದ್ದಿರಬೇಕು.

ನ್ಯಾಯಾಲಯಗಳಲ್ಲಿ ನಿರ್ಣಯ ಸಿಗುತ್ತದೆಯೇ ಹೊರತು ನ್ಯಾಯ ಸಿಗುತ್ತಿಲ್ಲ - ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷ
ರಾಜಕಾರಣಿಗಳು ನೆಮ್ಮದಿಯಿಂದ ಇರುವುದು ಆ ಕಾರಣಕ್ಕಾಗಿಯೇ.

ಗೋಸಂಪತ್ತು ಉಳಿಸುವ ಪ್ರಯತ್ನದ ಅಂಗವಾಗಿ ಸರಕಾರಿ ನೌಕರರು, ಇತರ ಸಂಸ್ಥೆಗಳ ಅಧಿಕಾರಿಗಳು ಗೋವನ್ನು ದತ್ತು ಪಡೆಯಬೇಕು - ಪ್ರಭು ಚವ್ಹಾಣ್, ಸಚಿವ
ಬೀದಿಯಲ್ಲಿರುವ ಅನಾಥ ಮಕ್ಕಳನ್ನು ಯಾರೂ ದತ್ತು ತೆಗೆದು ಕೊಳ್ಳುವ ಅಗತ್ಯವಿಲ್ಲವೇ ?

ಪ್ರಧಾನಿ ಮೋದಿ ವಿಶ್ವಗುರು ಅಲ್ಲ, ಅವರೊಬ್ಬ ಪುಕ್ಕಲು ಗುರು - ಸಿದ್ದರಾಮಯ್ಯ, ಮಾಜಿ ಸಿಎಂ
ಗುರು ಹೌದು ಎನ್ನುವುದನ್ನು ಒಪ್ಪಿಕೊಂಡಿರಲ್ಲ, ಭಕ್ತರಿಗೆ ಅಷ್ಟು ಸಾಕು.

ವಿಚಾರಣೆಗಾಗಿ ಭಾರತಕ್ಕೆ ಗಡಿಪಾರು ಮಾಡಿದರೆ ನನ್ನ ಕೊಲೆಯಾಗಬಹುದು ಅಥವಾ ನಾನೇ ಆತ್ಮಹತ್ಯೆ ಮಾಡಿಕೊಳ್ಳಬಹುದು - ನೀರವ್ ಮೋದಿ, ದೇಶದಿಂದ ಪಲಾಯನ ಮಾಡಿರುವ ವಜ್ರೋದ್ಯಮಿ
ಬ್ಯಾಂಕ್ ನಿಂದ ಸಾಲ ಪಡೆಯುವಾಗ ಈ ಭಯ ಯಾಕೆ ಇರಲಿಲ್ಲ?

ನನ್ನನ್ನು ಅವಹೇಳನ ಮಾಡುವ ಕೆಲಸವನ್ನು ಕಾಂಗ್ರೆಸ್ ಈಗ ಹೊರಗುತ್ತಿಗೆ ನೀಡಿದೆ - ನರೇಂದ್ರ ಮೋದಿ, ಪ್ರಧಾನಿ
ದೇಶದ ಅವನತಿಗೆ ನೀವು ಹೊರ ಗುತ್ತಿಗೆ ನೀಡಿದ ಹಾಗೆಯೇ?

ಜಯಪ್ರಕಾಶ್ ನಾರಾಯಣರು ಕಾಂಗ್ರೆಸ್ ವಿರುದ್ಧ ಜೀವನವೆಲ್ಲ ಹೋರಾಡಿದ್ದರೆ, ಅದೇ ಕಾಂಗ್ರೆಸ್ ಪಕ್ಷದ ತೊಡೆಯಲ್ಲಿ ಅವರ ಅನುಯಾಯಿಗಳು ಕುಳಿತಿದ್ದಾರೆ - ಅಮಿತ್ ಶಾ, ಕೇಂದ್ರ ಸಚಿವ
ಅದಾನಿ, ಅಂಬಾನಿ ತೊಡೆಯಲ್ಲಿ ಕುಳಿತು ದೇಶ ಆಳುವುದಕ್ಕಿಂತ ವಾಸಿ ಅಲ್ಲವೇ ?

ಮುಸ್ಲಿಮ್ ಮಹಿಳೆಯರು ಪುರುಷರ ತಾಳಕ್ಕೆ ತಕ್ಕಂತೆ ಕುಣಿಯಬಾರದು - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿದರೆ ಆಗಬಹುದೇ?

ಭಾರತ ದೇಶವನ್ನು ಇಬ್ಭಾಗಮಾಡಲು ಯಾರಿಂದಲೂ ಸಾಧ್ಯವಿಲ್ಲ - ಬಾಬಾ ರಾಮ್‌ದೇವ್, ಯೋಗ ಗುರು
ಅದಕ್ಕಾಗಿಯೇ ನಿಮ್ಮಂಥವರನ್ನು ಇಟ್ಟುಕೊಂಡಿರುವುದು ಸರಕಾರ.

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...