ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿರುವುದು ಅಸಂವಿಧಾನಿಕ: ಪ್ರೊ.ಅರವಿಂದ ಮಾಲಗತ್ತಿ
ಕಲಬುರಗಿ, ಅ. 17:‘ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂಬುದು ಸಂವಿಧಾನದ ಆಶಯ. ಆದರೆ, ಕೇಂದ್ರ ಸರಕಾರ ಇದನ್ನು ಮೀರಿ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಒದಗಿಸಿರುವುದುಸಂವಿಧಾನ ವಿರೋಧಿ ಕ್ರಮ' ಎಂದು ಹಿರಿಯ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಆಕ್ಷೇಪಿಸಿದ್ದಾರೆ.
ಸೋಮವಾರ ಇಲ್ಲಿನ ಕನ್ನಡ ಭವನದಲ್ಲಿ ಬಾಮ್‍ಸೆಫ್ ಮತ್ತು ಯುನಿಟಿ ಆಫ್ ಮೂಲನಿವಾಸಿ ಸಂಘಟನೆಯ ಏರ್ಪಡಿಸಿದ್ದ 15ನೆ ರಾಜ್ಯ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ‘ಕೇಂದ್ರ ಸರಕಾರ ಯಾವುದೇ ಮನವಿ, ಒತ್ತಾಯ ಇಲ್ಲದೆ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿದ್ದು, ಇದು ಶೋಷಿತ ಸಮುದಾಯಗಳನ್ನು ಮೀಸಲಾತಿಯಿಂದ ವಂಚನೆ ಹುನ್ನಾರ ಅಡಗಿದೆ' ಎಂದು ಟೀಕಿಸಿದರು.
‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಆದರೆ, ಸ್ವಾತಂತ್ರ್ಯ ಕೇವಲ ರಾಷ್ಟ್ರಕ್ಕೆ ಸಿಕ್ಕರೆ ಸಾಲದು, ದೇಶದಲ್ಲಿನ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯದ ಆಶಯಗಳು ತಲುಪುವಂತೆ ಮಾಡಬೇಕೆಂಬುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಬ್ರಿಟಿಷರು ಭಾರತ ಬಿಟ್ಟು ಹೋದದ್ದು ಸ್ವಾತಂತ್ರ್ಯವಲ್ಲ. ದೇಶದ ಎಲ್ಲ ನಿವಾಸಿಗಳಿಗೆ ಸಂವಿಧಾನ ಆಶಯದಂತೆ ಸಮಾನ ಅವಕಾಶಗಳು ಮತ್ತು ಸೌಲಭ್ಯಗಳು ಸಿಗಬೇಕು' ಎಂದು ಅರವಿಂದ ಮಾಲಗತ್ತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬುದ್ಧ ವಿಹಾರದ ಭಂತೆ ಅಮರ ಜ್ಯೋತಿ, ಜೇವರ್ಗಿಯ ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮಿ, ಚಂದ್ರಶೇಖರ ದೊಡ್ಡಮನಿ, ಡಾ.ಸುನಿಲ್ ಕುಮಾರ ಒಂಟಿ, ಸಿಇಸಿ ಸದಸ್ಯ ಸುಭಾಷ ಶೀಲವಂತ, ಸಂಘಟನೆಯ ಪ್ರಚಾರಕ ಎನ್.ಬಿ.ಕುರ್ಣೆ, ಯಲ್ಲಪ್ಪ ತಳವಾರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.