ಬಿಎಸ್‍ವೈ ವಿರುದ್ಧ ಹೇಳಿಕೆ; ಶಾಸಕ ಯತ್ನಾಳ್‍ಗೆ ನೋಟಿಸ್: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

Update: 2022-10-17 14:04 GMT

ಬೆಳಗಾವಿ, ಅ.17: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ವಿಜಯಸಂಕಲ್ಪ ಯಾತ್ರೆ ಮುಂದುವರೆಸಿದರೆ, ರಾಜ್ಯದಲ್ಲಿ ಬಿಜೆಪಿ ಸೋಲನುಭವಿಸುತ್ತದೆ’ ಎಂದು ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ನೋಟಿಸ್ ನೀಡಲಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವ ರೀತಿಯಲ್ಲಿ ಹಾಗೂ ರಾಜ್ಯ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಚಿವ ಸ್ಥಾನ ಸಿಗಲಿಲ್ಲವೆಂದು ಯತ್ನಾಳ್ ಈ ರೀತಿ ಮಾತನಾಡುತ್ತಿದ್ದಾರೆ. ಯಾರೆ ಆದರೂ ಪಕ್ಷದ ಚೌಕಟ್ಟಿನಲ್ಲಿರಬೇಕು. ಹಿರಿಯ ನಾಯಕರನ್ನು ಗೌರವದಿಂದ ಕಾಣಬೇಕು ಎಂದರು.

ಯತ್ನಾಳ್ ಹೇಳಿಕೆಯಿಂದ ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲ. ಅವರ ಹೇಳಿಕೆಗಳನ್ನು ಪಕ್ಷದ ಕಾರ್ಯಕರ್ತರೇ ನಿರ್ಲಕ್ಷ್ಯಿಸುತ್ತಾರೆ. ಈ ಹಿಂದೆ ಬಿಜೆಪಿಯಿಂದ ಹೊರಗೆ ಹೋಗಿದ್ದ ಯತ್ನಾಳ್ ಪುನಃ ಬಂದಿದ್ದಾರೆ. ಅವರು ನಮ್ಮ ಪಕ್ಷದ ಕೋರ್ ಕಮಿಟಿಯ ಸದಸ್ಯರೂ ಅಲ್ಲ. ಇಂತಹ ಹೇಳಿಕೆಗಳು ಯಾರಿಗೂ ಇಷ್ಟವಾಗುವುದಿಲ್ಲ ಎಂದು ಅರುಣ್ ಸಿಂಗ್ ಹೇಳಿದರು.

ಪಂಚಮಸಾಲಿ ಲಿಂಗಾಯತರು ಹಮ್ಮಿಕೊಂಡಿರುವ ಮೀಸಲಾತಿ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ನಿರ್ಧಾರ ತೆಗೆದುಕೊಂಡಿದೆ. ಪಂಚಮಸಾಲಿ ಸಮುದಾಯದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಹಾಗೂ ಶಂಕರ ಪಾಟೀಲ್ ಮುನೇನಕೊಪ್ಪ ಸಚಿವರಾಗಿದ್ದಾರೆ. ಅವರ ಸಮುದಾಯದ ಮೀಸಲಾತಿ ವಿಚಾರದ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದರು.

ರಾಜ್ಯ ಬಿಜೆಪಿಯಲ್ಲಿ ಯಾವುದೆ ಗುಂಪುಗಾರಿಕೆ ಇಲ್ಲ. ಅದೇನಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ಬಣಗಳನ್ನು ಮಾಡಿಕೊಂಡಿದ್ದಾರೆ. ಬಿಜೆಪಿಯವರು ಒಗ್ಗಟ್ಟಾಗಿ ಪ್ರಧಾನಿ ಮೋದಿ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿಲ್ಲ. ಅವರೊಬ್ಬ ಜನಪ್ರಿಯ ನಾಯಕ, ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಪಡೆಯುವಂತೆ ಶ್ರಮಿಸುತ್ತಿದ್ದಾರೆ ಎಂದು ಅರುಣ್ ಸಿಂಗ್ ಹೇಳಿದರು. 

ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ: BJP ರಾಜ್ಯ ಉಸ್ತುವಾರಿ ಅರುಣ್ ಸಿಂಗ್


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News