ರಜಪೂತರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಸಿ.ಟಿ. ರವಿ ವಿರುದ್ಧ ಪ್ರತಿಭಟನೆ

Update: 2022-10-17 14:43 GMT

ಶಿವಮೊಗ್ಗ, ಅ.17: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಟಿವಿ ಮಾಧ್ಯಮವೊಂದರ ಸಂದರ್ಶನದಲ್ಲಿ ರಜಪೂತ ಸಮಾಜದ ಬಗ್ಗೆ ಕೊಟ್ಟಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ರಜಪೂತ್ ಸಭಾ ವತಿಯಿಂದ ಸಿ.ಟಿ ರವಿ ಅವರ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಿ.ಟಿ. ರವಿ ಇತ್ತೀಚೆಗೆ ಟಿ.ವಿ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದೇಶದ ಇತಿಹಾಸವನ್ನು ಕೆಣಕಿ ರಜಪೂತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಬ್ರಿಟಿಷರ ವಿರುದ್ಧ ಸ್ವತಂತ್ರ ಹೋರಾಟ ಮಾಡುವಾಗ ರಜಪೂತರು ‘ಇದು ತಮ್ಮ ಕೆಲಸ ಅಲ್ಲ’ ಎಂದು ಸುಮ್ಮನೆ ಕುಳಿತಿದ್ದರು ಮತ್ತು ಶಿವಾಜಿ ಮೊಘಲರ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುವಾಗ ಇದೇ ರಜಪೂತರು ಮೊಘಲರ ಜೊತೆ ಇದ್ದರು ಎಂದು ಹೇಳಿ ರಜಪೂತ ಸಮಾಜಕ್ಕೆ ಅವಮಾನ ಮಾಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು. 

'ಸಿ.ಟಿ. ರವಿ ಚರಿತ್ರೆ ಹಾಗೂ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡದೇ, ಅಗತ್ಯವಾದ ಮಾಹಿತಿ ಸರಿಯಾಗಿ ತಿಳಿದುಕೊಳ್ಳದೇ ಕೇವಲ ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಮಾತಾಡಿ ಸಮಾಜದ ಗೌರವವಕ್ಕೆ ಧಕ್ಕೆ ತಂದಿರುತ್ತಾರೆ' ಎಂದು ಪ್ರತಿಭಟನಾಕಾರರು  ದೂರಿದರು.

''ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ಇತಿಹಾಸಗಾರರೇ ವರ್ಣಿಸಿದಂತೆ ಈ ದೇಶದ ಚರಿತ್ರೆಯಲ್ಲಿ ಮೊಘಲರ ವಿರುದ್ಧ ಪರಾಕ್ರಮದಿಂದ ರಜಪೂತ ರಾಜರುಗಳು ಸೆಣಸಾಡಿದ್ದರೆಂದು, ಮೊಘಲರಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದರೆಂದು, ಅನೇಕ ಯುದ್ಧಗಳಲ್ಲಿ ಮೊಘಲರನ್ನು ಸೋಲಿಸಿದರೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮೊಘಲರಾದ ಔರಂಗಜೇಬ್, ಅಕ್ಬರ್ ಕಾಲದಲ್ಲಿ ರಜಪೂತರ ಹೋರಾಟ ಮತ್ತು ಪರಾಕ್ರಮವನ್ನು ಚರಿತ್ರೆಯು ಹೊಗಳುತ್ತದೆ. ಈಗಲೂ ಕೂಡ ದೇಶ ಪ್ರೇಮ, ಹೋರಾಟ, ಪರಾಕ್ರಮ, ಧರ್ಮ, ನಿಷ್ಠೆ ವಿಷಯ ಬಂದಾಗ ರಜಪೂತ ಜನಾಂಗದವರು ಎಲ್ಲರಿಗೂ ಮಿಗಿಲಾಗಿ ನಿಲ್ಲುತ್ತಾರೆ. ಸೈನ್ಯದಲ್ಲಿ ಈಗಲೂ ಅಪಾರ ಸಂಖ್ಯೆಯಲ್ಲಿ ರಜಪೂತರು ಇದ್ದು, ಅವರ ಕರ್ತವ್ಯ, ನಿಷ್ಠೆ, ಧೈರ್ಯ ಮತ್ತು ಪರಾಕ್ರಮಗಳಿಗೆ ಸಾಕ್ಷಿಯಾಗಿರುತ್ತದೆ. ಇಂತಹ ಸಮಾಜದ ವಿರುದ್ಧ ಸಿ.ಟಿ, ರವಿಯವರು ಬಾಯಿಗೆ ಬಂದಂತೆ ಮಾತನಾಡಿರುವುದು ಖಂಡನೀಯ'' ಎಂದು ಅಸಮಾಧಾನ ವ್ಯಕ್ತಪಡಿಸಿದರು. 

'ಇತಿಹಾಸ ಚರಿತ್ರೆಯನ್ನು ಸರಿಯಾಗಿ ಓದಿ ಹೇಳಿಕೆ ನೀಡುವ ಪ್ರಬುದ್ಧತೆ ಸಿ.ಟಿ.ರವಿ ಅವರಲ್ಲಿ ಇಲ್ಲ ಎಂಬುದು ಸಾಬೀತಾಗಿರುತ್ತದೆ. ಕಡೇ ಪಕ್ಷ ಅವರು ಹೊಂದಿರುವ ಹುದ್ದೆಯ ಸ್ಥಾನಮಾನದ ಮರ್ಯಾದೆಗಾದರೂ ಸರಿಯಾಗಿ ಮಾತನಾಡುವುದನ್ನು ಅವರು ಕಲಿಯುವುದು ಸೂಕ್ತ. ಇತಿಹಾಸದಲ್ಲಿ ನಡೆದ ಎಲ್ಲಾ ಘಟನೆಗಳು ಆಯಾ ಕಾಲಮಾನದ ವಸ್ತುಸ್ಥಿತಿಗನುಗುಣವಾಗಿ ನಡೆದಿರುತ್ತದೆ ಎಂಬ ಕನಿಷ್ಠ ಜ್ಞಾನವೂ ಇವರಿಗೆ ಇಲ್ಲದಿರುವುದು ಖೇದನೀಯ, ಇತಿಹಾಸನವನ್ನು ಈಗಿನ ಕಾಲಘಟಕ್ಕೆ ತಳಕು ಹಾಕಿ ಓರೆಗಲ್ಲಿಗೆ ಹಚ್ಚುವುದು, ಇತಿಹಾಸದಲ್ಲಿ ಮೆರೆದ ಮಹಾನೀಯರ ಬಗ್ಗೆ ಕೀಳಾಗಿ ಮಾತನಾಡುವುದು ಸಿ.ಟಿ. ರವಿ ಅಂತ ವಾಚಾಳಿ ವ್ಯಕ್ತಿಗಳ ಹವ್ಯಾಸವಾಗಿ ಬಿಟ್ಟಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಶಿವಾಜಿ ಮಹಾರಾಜರನ್ನು ಎತ್ತಿ ಕಟ್ಟಿ ರಜಪೂತ ಸಮಾಜವನ್ನು ತೆಗಳಿ ಕ್ಷತ್ರಿಯರಲ್ಲಿ ಒಡಕು ಮೂಡಿಸುವ ಪ್ರಯತ್ನವನ್ನು ಮಾಡಿರುತ್ತಾರೆ. ಈ ರೀತಿ ಸಮಾಜ ಒಡೆದು ರಾಜಕೀಯ ಮಾಡುವ ಕೆಲಸ ಇವರಿಗೆ ಕರಗತವಾಗಿಬಿಟ್ಟಿದೆ. ಈ ರೀತಿ ಹೇಳಿಕೆ ಕೊಡುವ ಮುನ್ನ ಸಿ.ಟಿ. ರವಿಯವರ ಪೂರ್ವಜರು ದೇಶಕ್ಕಾಗಿ ಏನು ತ್ಯಾಗ-ಬಲಿದಾನ ಮಾಡಿದ್ದಾರೆ ಎಂದು ಮೊದಲು ಹೇಳಲಿ. ಇಂತಹ ಕೀಳು ಮಟ್ಟದ ಕ್ಷುಲ್ಲಕ ಹೇಳಿಕೆ ನೀಡಿ ರಜಪೂತ್ ಸಮಾಜಕ್ಕೆ ಅವಮಾನ ಮಾಡಿದ ಸಿ.ಟಿ. ರವಿ ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು '' ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಶಾಂತಿ ಕದಡಿದ ಸಿ.ಟಿ. ರವಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ರಜಪೂತ್ ಸಭಾದ ಅಧ್ಯಕ್ಷ ಆರ್.ದೀಪಕ್ ಸಿಂಗ್ ವಹಿಸಿದ್ದು, ಎಸ್.ಎಂ.ವಿಶ್ವನಾಥ್ ಸಿಂಗ್, ಎಸ್.ಡಿ. ಅನಂತರಾಂಸಿಂಗ್, ರವೀಂದ್ರಸಿಂಗ್, ರಾಜೇಂದ್ರಸಿಂಗ್, ಆರ್.ಹೆಚ್.ಸತ್ಯನಾರಾಯಣಸಿಂಗ್, ಕೆ.ನರಸಿಂಗ್, ಆರ್.ಪಿ.ಭರತ್ ಸಿಂಗ್, ರಘುವೀರ್ ಸಿಂಗ್, ಬಿ.ವಿಜಯ್ ಸಿಂಗ್, ಎಲ್.ನರೇಂದ್ರಸಿಂಗ್, ವಿ.ಸೋಹನ್ ಸಿಂಗ್, ರೂಪ ಕುಮಾರ್ ಸಿಂಗ್, ಎಂ.ಗುರುರಾಜ್ ಸಿಂಗ್, ಹರಿನಾಥ್ ಸಿಂಗ್, ಉದಯ ಸಿಂಗ್, ಶಂಕರ್‌ಸಿಂಗ್ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News