ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳ | ಸುಗ್ರೀವಾಜ್ಞೆ ಮೂಲಕ ಅನುಷ್ಠಾನಕ್ಕೆ ಸರಕಾರದ ನಿರ್ಧಾರ: ಸಚಿವ ಬಿ.ಶ್ರೀರಾಮುಲು

Update: 2022-10-17 18:30 GMT

ಬೆಂಗಳೂರು, ಅ. 17: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ)ಕ್ಕೆ ಮೀಸಲಾತಿ ಹೆಚ್ಚಳ ಮಾಡುವ ತೀರ್ಮಾನವನ್ನು ಅಧ್ಯಾದೇಶದ (ಸುಗ್ರೀವಾಜ್ಞೆ) ಮೂಲಕ ಈ ವಾರದಿಂದಲೇ ಜಾರಿಗೆ ತರಲು ರಾಜ್ಯ ಸರಕಾರ ನಿರ್ಧರಿಸಿದೆ' ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಎಸ್‍ಸಿ-ಎಸ್‍ಟಿ ಮೀಸಲಾತಿ ಹೆಚ್ಚಳ ಮಾಡಿ ಸರಕಾರ ಕೈಗೊಂಡ ತೀರ್ಮಾನವನ್ನು ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಬೇಕು. ನ್ಯಾ. ನಾಗಮೋಹನ್ ದಾಸ್ ವರದಿ ಶಿಫಾರಸಿನಂತೆ ಎಸ್‍ಸಿಗೆ ಶೇ.15ರಿಂದ 17ಕ್ಕೆ ಹೆಚ್ಚಳ ಮಾಡಲಾಗಿದೆ. ಎಸ್‍ಟಿಗೆ ಶೇ.3ರಿಂದ ಶೇ.7ಕ್ಕೆ ಹೆಚ್ಚಳ ಮಾಡಲಾಗಿದೆ. ಸುಗ್ರೀವಾಜ್ಞೆಯ ಮೂಲಕ ಪರಿಷ್ಕೃತಗೊಂಡ ಆದೇಶವನ್ನು ಕೇಂದ್ರಕ್ಕೆ ಶಿಫಾರಸು ಮಾಡಿ ಸಂವಿಧಾನದ ಪರಿಚ್ಚೇದ-9ರಲ್ಲಿ ಸೇರಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.

‘ನನಗೆ ತಿಳಿದಿರುವ ಮಾಹಿತಿಯಂತೆ ರಾಜ್ಯ ಸರಕಾರ ಕೈಗೊಂಡ ನಿರ್ಧಾರವನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ.ಕೇಂದ್ರ ಸರಕಾರವೂ ಪರಿಚ್ಚೇದ-9ಕ್ಕೆ ಸೇರಿಸಿ ಕಾನೂನು ತೊಡಕುಗಳನ್ನು ನಿವಾರಿಸುವ ವಿಶ್ವಾಸವಿದೆ. ಚಳಿಗಾಲದ ಅಧಿವೇಶನದಲ್ಲಿ ಸರಕಾರ ಈ ಸಂಬಂಧ ಆದೇಶವನ್ನು ಮಂಡನೆ ಮಾಡಿ ನಂತರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಿದೆ' ಎಂದು ಶ್ರೀರಾಮುಲು ವಿವರಣೆ ನೀಡಿದರು.

‘ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೊದಲೇ ಅಧ್ಯಾದೇಶ(ಸುಗ್ರೀವಾಜ್ಞೆ)ದ ಮೂಲಕ ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ಅನುಷ್ಟಾನಗೊಳಿಸುವುದರಿಂದ ಆ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗ ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿ ಲಭ್ಯವಾಗಲಿದೆ. ಈ ವಿಚಾರಕ್ಕೆ ಸಾಮಾನ್ಯವಾಗಿ ಯಾವುದೇ ಅಡ್ಡಿಬರಲು ಸಾಧ್ಯವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News